Home ಟಾಪ್ ಸುದ್ದಿಗಳು ಗೋ ಹತ್ಯೆ ನೆಪದಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆ: ಬಜರಂಗದಳದ ಜಿಲ್ಲಾ ಸಂಚಾಲಕನ ಜಾಮೀನಿಗೆ ತಡೆ

ಗೋ ಹತ್ಯೆ ನೆಪದಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆ: ಬಜರಂಗದಳದ ಜಿಲ್ಲಾ ಸಂಚಾಲಕನ ಜಾಮೀನಿಗೆ ತಡೆ

ನವದೆಹಲಿ: ಪೊಲೀಸ್ ಅಧಿಕಾರಿಯೊಬ್ಬರ ಸಾವಿಗೆ ಕಾರಣವಾದ 2018ರ ಬುಲಂದ್ ಶಹರ್ ಗುಂಪು ಹತ್ಯೆ ಪ್ರಕರಣದ ಆರೋಪಿ ಯೋಗೀಶ್ ರಾಜ್ ಗೆ ನೀಡಲಾಗಿದ್ದ ಜಾಮೀನಿಗೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ.

ಗೋಹತ್ಯೆಯಲ್ಲಿ ಭಾಗವಹಿಸಿದ ನೆಪವೊಡ್ಡಿ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದಿರುವುದು ಗಂಭೀರ ವಿಚಾರ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠ ಈ ಸಂದರ್ಭದಲ್ಲಿ ತಿಳಿಸಿತು.

ಗೋಹತ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಕಾರಣಕ್ಕೆ ಗುಂಪೊಂದು ಇನ್ ಸ್ಪೆಕ್ಟರ್ ಸುಬೋಧ್ ಸಿಂಗ್ ಮೇಲೆ ಹಲ್ಲೆ ನಡೆಸಿ ಗುಂಡಿಟ್ಟು ಕೊಂದಿತ್ತು. ಸಿಂಗ್ ಪತ್ನಿ ರಜನಿ ಸಿಂಗ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಾಯಾಲಯ ಈ ಆದೇಶ ನೀಡಿದೆ. ಭಜರಂಗದಳದ ಜಿಲ್ಲಾ ಸಂಚಾಲಕರಾಗಿರುವ ಆರೋಪಿಗಳು ಡಿಸೆಂಬರ್ 3, 2018 ರಂದು ಕೋಮುಗಲಭೆ ಉಂಟುಮಾಡಲು ಗುಂಪನ್ನು ಒಟ್ಟುಗೂಡಿಸಿದರು ಎಂದು ಅರ್ಜಿದಾರರು ಆರೋಪಿಸಿದ್ದರು.

ಪ್ರಕರಣದ ಸಹ ಆರೋಪಿಗೆ ಜಾಮೀನು ನೀಡಲಾಗಿದ್ದ ಆಧಾರದಲ್ಲಿ ಆರೋಪಿ ಯೋಗೇಶ್ ರಾಜ್ ಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ವಿಚಾರಣೆ ಬಾಕಿ ಇದ್ದು ಆರೋಪಿ ವಿದೇಶಕ್ಕೆ ಪಲಾಯನ ಮಾಡಬಹುದಷ್ಟೇ ಅಲ್ಲದೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು ಎಂದು ಆರೋಪಿಸಿ ಅರ್ಜಿದಾರರು ಜಾಮೀನು ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.

ವಾದ ಆಲಿಸಿದ ಪೀಠ ಯೋಗೇಶ್ ರಾಜ್ ಜಾಮೀನಿಗೆ ತಡೆ ನೀಡಿ ಏಳು ದಿನಗಳ ಒಳಗೆ ಶರಣಾಗುವಂತೆ ಆದೇಶಿಸಿದೆ. ಅಲ್ಲದೆ ಆರೋಪ ನಿಗದಿ ಮತ್ತು ಸಾಕ್ಷ್ಯ ಹೇಳಿಕೆ ದಾಖಲೀಕರಣಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂದು ವಿವರಿಸುವ ವರದಿ ನೀಡುವಂತೆ ಬುಲಂದ್ ಶಹರ್ ನ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ. ಮೂರು ವಾರಗಳ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

Join Whatsapp
Exit mobile version