Home ಟಾಪ್ ಸುದ್ದಿಗಳು ಕೋವಿಡ್‌ ನಿಂದ ಮಗನ ಸಾವು ; ತಿಂಗಳಿನಿಂದ ಪ್ರಯತ್ನಿಸುತ್ತಿದ್ದರೂ ಪೊಲೀಸರು ದೂರು ದಾಖಲಿಸುತ್ತಿಲ್ಲ: ಸ್ವತಃ ಬಿಜೆಪಿ...

ಕೋವಿಡ್‌ ನಿಂದ ಮಗನ ಸಾವು ; ತಿಂಗಳಿನಿಂದ ಪ್ರಯತ್ನಿಸುತ್ತಿದ್ದರೂ ಪೊಲೀಸರು ದೂರು ದಾಖಲಿಸುತ್ತಿಲ್ಲ: ಸ್ವತಃ ಬಿಜೆಪಿ ಶಾಸಕನ ಅಳಲು

ಹರ್ದೋಯಿ : ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿಯೇ ತಮ್ಮ ಮಗನ ಸಾವಾಗಿದೆ. ಈ ಬಗ್ಗೆ ದೂರು ಸಲ್ಲಿಸಲು ಒಂದು ತಿಂಗಳಿನಿಂದ ಪ್ರಯತ್ನಿಸುತ್ತಿದ್ದೇನೆ.  ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಶಾಸಕರೊಬ್ಬರು ಆಪಾದಿಸಿದ್ದಾರೆ.

ಹರ್ದೋಯಿ ಜಿಲ್ಲೆಯ ಸ್ಯಾಂಡಿಲಾ ಬಿಜೆಪಿ ಶಾಸಕ ರಾಜ್‌ ಕುಮಾರ್‌ ಅಗರ್ವಾಲ್‌ ಅವರ ಮೂವತ್ತೈದರ ಹರೆಯದ ಮಗ ಆಶಿಷ್‌ ಏ.೨೬ರಂದು ಕಾಕೊರಿಯ ಒಂದು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕೋವಿಡ್‌ ಪಾಸಿಟಿವ್‌ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿ ದಾಖಲಿಸಲಾಗಿತ್ತು.

ಏ.೨೬ರಂದು ಬೆಳಗ್ಗೆ ನಮ್ಮ ಮಗನ ಆಕ್ಸಿಜನ್‌ ಮಟ್ಟ ೯೪ ಇತ್ತು. ಸರಿಯಾಗಿಯೇ ಊಟ ಮಾಡುತ್ತಿದ್ದ ಮತ್ತು ನಮ್ಮೊಂದಿಗೆ ಮಾತನಾಡಿದ್ದಾನೆ. ಸಂಜೆ ವೇಳೆ ಏಕಾಏಕಿ ಆಕ್ಸಿಜನ್‌ ಲೆವೆಲ್‌ ಕುಸಿದಿತ್ತು. ನಾವು ಹೊರಗಿಂದ ಆಕ್ಸಿಜನ್‌ ವ್ಯವಸ್ಥೆ ಮಾಡಿದ್ದರೂ, ಆಸ್ಪತ್ರೆಯ ವೈದ್ಯರು ಅದನ್ನು ರೋಗಿಗೆ ತಲುಪಲು ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಶಾಸಕ ರಾಜ್‌ ಕುಮಾರ್‌ ಆಪಾದಿಸಿದ್ದಾರೆ.

ಆ ದಿನ ಆ ಆಸ್ಪತ್ರೆಯಲ್ಲಿ ಏಳು ಮಂದಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ನಾನು ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪೊಲೀಸ್‌ ಕಮೀಶನರ್‌, ಡಿಜಿಪಿ ಎಲ್ಲರಿಗೂ ದೂರು ನೀಡಿದ್ದೇನೆ, ಆದರೆ ದೂರು ದಾಖಲಾಗಿಲ್ಲ. ಪೊಲೀಸರು ಆಸ್ಪತ್ರೆಯ ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಬೇಕು ಮತ್ತು ನನ್ನ ಮಗನ ಸಾವಿಗೆ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಬೇಕು. ಸಂಬಂಧಪಟ್ಟ ವೈದ್ಯರನ್ನು ಶಿಕ್ಷಿಸಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version