Home ಟಾಪ್ ಸುದ್ದಿಗಳು ಶರಣ್ ಪಂಪ್’ವೆಲ್ ಬೆದರಿಕೆಗೆ ಸವಾಲು: SDPI ನಾಯಕ ರಿಯಾಝ್ ಕಡಂಬುಗೆ ಪೊಲೀಸರ ನೋಟಿಸ್

ಶರಣ್ ಪಂಪ್’ವೆಲ್ ಬೆದರಿಕೆಗೆ ಸವಾಲು: SDPI ನಾಯಕ ರಿಯಾಝ್ ಕಡಂಬುಗೆ ಪೊಲೀಸರ ನೋಟಿಸ್

ಮಂಗಳೂರು: ಕಂಕನಾಡಿ ಮಸೀದಿ ಪಕ್ಕದ ಒಳ ರಸ್ತೆಯ ಬದಿಯ ನಮಾಝ್ ವಿಚಾರಕ್ಕೆ ಸಂಬಂಧಿಸಿ ವಿಎಚ್ ಪಿ ಮುಖಂಡ ಶರಣ್ ಪಂಪ್’ವೆಲ್ ಹೇಳಿಕೆಗೆ ಸಂಬಂಧಿಸಿ ಪ್ರತಿ ಹೇಳಿಕೆ ನೀಡಿದ್ದ SDPI ರಾಜ್ಯ ಮುಖಂಡ ರಿಯಾಝ್ ಕಡಂಬುಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಿಂದ ಕಲಂ 107 ಅಡಿ ನೋಟಿಸ್ ಜಾರಿಯಾಗಿದೆ. ಕಾನೂನು ಸುವ್ಯವಸ್ಥೆ ಡಿಸಿಪಿ ಬಿ.ಪಿ ದಿನೇಶ್ ಕುಮಾರ್ ಅವರು ನೋಟಿಸ್ ಜಾರಿ ಮಾಡಿದ್ದು ಮೇ 30ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚಿಸಿದ್ದರು.

ಕಲಂ 107 ನೋಟಿಸ್’ನಲ್ಲೇನಿದೆ?
ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ನಗರದ ಕಂಕನಾಡಿ ಮಸೀದಿ ಪಕ್ಕದ ರಸ್ತೆಯಲ್ಲಿ ನಮಾಝ್ ಮಾಡಿದ ವಿಚಾರವಾಗಿ “ಬಜರಂಗದಳದವರು ತಡೆಯಲು ಬಂದರೆ ನಾವೇನು ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ” ಎಂದು ಪತ್ರಿಕಾಗೋಷ್ಟಿಯಲ್ಲಿ ಹೇಳಿಕೆಯನ್ನು ನೀಡಿರುತ್ತೀರಿ. ನೀವು ನೀಡಿರುವ ಈ ಹೇಳಿಕೆಯಿಂದಾಗಿ ಸಮಾಜದಲ್ಲಿ ಅಶಾಂತಿ ಹಾಗೂ ಕೋಮು ಗಲಭೆ ಸೃಷ್ಟಿಯಾಗಿ ಸಾರ್ವಜನಿಕ ಶಾಂತಿಭಂಗ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವ ಸಾದ್ಯತೆ ಇರುವುದಾಗಿ ಗುಪ್ತ ಮಾಹಿತಿ ಇರುತ್ತದೆ.


ನಿಮ್ಮ ಈ ವರ್ತನೆಯು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವಂತೆ ಕಂಡು ಬರುತ್ತಿದ್ದು, ಆದ್ದರಿಂದ ನೀವು ಮುಂಬರುವ ದಿನಗಳಲ್ಲಿ ಸಾರ್ವಜನಿಕ ನೆಮ್ಮದಿಗೆ ತೊಂದರೆಯನ್ನುಂಟು ಮಾಡುವುದರಲ್ಲಿ ಪರಿಣಮಿಸಬಹುದಾದ ಯಾವುದೇ ಸಂಜ್ಞೆಯ ಅಪರಾಧಗಳಲ್ಲಿ ಭಾಗಿಯಾಗದೆ ಇರುವ ಬಗ್ಗೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತ ಹಾಗೂ ಪರಿಸರದಲ್ಲಿ ಶಾಂತಿಪಾಲನೆ ಮಾಡಿಕೊಂಡು ಇರಲು ಷರತ್ತುಬದ್ಧ ಮುಚ್ಚಳಿಕೆ ಪಡೆದುಕೊಳ್ಳುವಂತೆ ದಂಡಸಂಹಿತೆ ಪ್ರಕ್ರಿಯೆಯ ಕಾಲಂ 117 ಅಡಿ ಆದೇಶಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
ಆದುದರಿಂದ ಈ ಅರ್ಜಿಯನ್ನು ಪುರಸ್ಕರಿಸಿ ನೀವು ಮುಂದಿನ ದಿನಗಳಲ್ಲಿ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಕೃತ್ಯದಲ್ಲಿ ಭಾಗಿಯಗದೇ, ಸಾರ್ವಜನಿಕ ಶಾಂತಿ ಸೌಹಾರ್ಧತೆಗೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದಿಲ್ಲವೆಂದು ಒಪ್ಪಿಕೊಂಡು ಒಂದು ವರ್ಷದ ಅವಧಿಯವರೆಗೆ ರೂ. 50,000/- ಮೊತ್ತದ ವೈಯಕ್ತಿಕ ಮುಚ್ಚಳಿಕೆ ಹಾಗೂ ಅಷ್ಟೇ ಅವಧಿ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರಿಂದ ಜಾಮೀನು ಮುಚ್ಚಳಿಕೆ ನೀಡಲು ದಂಡ ಪ್ರಕ್ರಿಯಾ ಸಂಹಿತೆಯ ಕಲಂ: 117 ರಡಿ ಆದೇಶಿಸಲು ನಿರ್ಧರಿಸಿರುತ್ತೇನೆ.
ಅರ್ಜಿದಾರರು ನಿಮ್ಮ ಮೇಲೆ ಮಾಡಿರುವ ಆಪಾದನೆಗಳ ಆಧಾರದ ಮೇಲೆ ನಿಮ್ಮ ವಿರುದ್ಧ ವಿಚಾರಣೆ ಕೈಗೊಂಡು ನಿಮ್ಮಿಂದ ಒಂದು ವರ್ಷದ ಅವಧಿಯವರೆಗೆ ರೂ.50,000/- (ರೂಪಾಯಿ ಐವತ್ತು ಸಾವಿರ) ಮೊತ್ತದ ವೈಯಕ್ತಿಕ ಮುಚ್ಚಳಿಕೆ ಹಾಗೂ ಅಷ್ಟೇ ಅವಧಿ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರು ಗಣ್ಯ ವ್ಯಕ್ತಿಯಿಂದ ಜಾಮೀನು ಮುಚ್ಚಳಿಕೆಯನ್ನು ಯಾಕೆ ಪಡೆದುಕೊಳ್ಳಬಾರದು ? ಎಂದು ಕಾರಣ ಕೇಳಿ ಸೂಚನಾ ಪತ್ರವನ್ನು ಹೊರಡಿಸಿರುತ್ತೇನೆ.

ನಿಮ್ಮ ಮೇಲೆ ಅರ್ಜಿದಾರರು ಆಪಾದಿಸಿರುವ ಮೇಲ್ಕಂಡ ಆರೋಪಗಳಿಗೆ ಸಂಬಂಧಿಸಿ ಹೊರಡಿಸಿರುವ ಈ ಕಾರಣ ಕೇಳುವ ಸೂಚನಾ ಪತ್ರಕ್ಕೆ ನೀವು ಈ ನ್ಯಾಯಾಲಯಕ್ಕೆ ಹಾಜರಾಗಿ ಖುದ್ದಾಗಿ ಅಥವಾ ವಕೀಲರ ಮೂಲಕ ಮೌಖಿಕ ಅಥವಾ ಲಿಖಿತ ವಿವರಣೆಯನ್ನು ಸಲ್ಲಿಸುವುದು.
ದಂಡ ಪ್ರಕ್ರಿಯಾ ಸಂಹಿತೆ ಕಲಂ: 107 ರ ಪ್ರಕರಣದಲ್ಲಿ ದಂಡ ಪ್ರಕ್ರಿಯಾ ಸಂಹಿತೆ ಕಲಂ: 111 ಯಂತೆ ಹೊರಡಿಸಲಾದ ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರಿಸಲು ನೀವು ಖುದ್ದಾಗಿ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿ ಮತ್ತು ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ಮಂಗಳೂರು ನಗರ ರವರ ಮುಂದೆ ದಿನಾಂಕ: 30-05-2024 ರಂದು ಪೂರ್ವಾಹ್ನ 11-00 ಗಂಟೆಗೆ ತಪ್ಪದೇ ಹಾಜರಾಗಲು ಈ ಮೂಲಕ ಸೂಚಿಸಲಾಗಿದೆ..

Join Whatsapp
Exit mobile version