Home ಟಾಪ್ ಸುದ್ದಿಗಳು ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು

ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು

ಬೆಂಗಳೂರು, ಜು.28: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಪ್ರಮುಖ ಆರೋಪಿಗಳ ಕಾಲಿಗೆ ಇಂದಿರಾನಗರ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ. ಕೋಲಾರದ ಕವಿರಾಜ್ (45) ಹಾಗೂ ಆನೇಕಲ್ ನಿವಾಸಿ ಅಂಬರೀಶ್ (35) ಗುಂಡೇಟು ತಿಂದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್ .ಡಿ.ಶರಣಪ್ಪ ತಿಳಿಸಿದ್ದಾರೆ.


ಕಳೆದ ವರ್ಷ ನ. 25ರಂದು ಕೋಲಾರದ ತಮ್ಮ ಫಾರ್ಮ್ ಹೌಸ್ ಬಳಿ ಕಾರಿನಲ್ಲಿ ಬರುವಾಗ ಆರೋಪಿ ಕವಿರಾಜ್ ನೇತೃತ್ವದ ತಂಡ ಕಾರು ಅಡ್ಡಗಟ್ಟಿ ಮಾಜಿ ಸಚಿವ ವರ್ತೂರು ಪ್ರಕಾಶ್ ಹಾಗೂ ಚಾಲಕನನ್ನು ಅಪಹರಿಸಿ 30 ಕೋಟಿಗೆ ಬೇಡಿಕೆ ಇಟ್ಟಿತ್ತು.
ಮೂರು ದಿನಗಳ ಬಳಿಕ ಕಾರಿನಲ್ಲಿ ಸುತ್ತಾಡಿಸಿ 48 ಲಕ್ಷ ರೂಪಾಯಿ ವಸೂಲಿ ಮಾಡಿದ್ದ ತಂಡ ಬಳಿಕ ಅವರನ್ನು ಬಿಡುಗಡೆ ಮಾಡಿತ್ತು. ಈ ಸಂಬಂಧ ಕೋಲಾರ ಪೊಲೀಸರು ಪ್ರಕರಣ ದಾಖಲಿಸಿ ಕವಿರಾಜ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು.


ಆಟೋ ಚಾಲಕನ ಕೊಲೆ:
ಜಾಮೀನಿನ ಮೇಲೆ ಹೊರಬಂದ ಆರೋಪಿ ಕವಿರಾಜ್ ಹಾಗೂ ಕೋಲಾರದ ಅಂಬರೀಶ್ ಇನ್ನಿತರ ಆರೋಪಿಗಳು ಹಣಕ್ಕಾಗಿ ಅಪಹರಣ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಇಂದಿರಾನಗರದ ಆಟೋ ಚಾಲಕ ವಿಜಯ್ ಕುಮಾರ್ ನನ್ನು ಕಳೆದ ಜು.5 ರಂದು ಅಪಹರಿಸಿ ಹಣ ನೀಡುವಂತೆ ಧಮ್ಕಿ ಹಾಕಿದ್ದಾರೆ. ಹಣ ತಲುಪಿಸುವುದು ತಡವಾಗಿದ್ದರಿಂದ ಆರೋಪಿಗಳು ಹೊಸೂರು ಬಳಿ ಬರ್ಬರವಾಗಿ ಕೊಲೆ ಮಾಡಿ ಮೃತದೇಹ ಹೂತು ಹಾಕಿದ್ದಾರೆ.


ತನಿಖೆ ನಡೆಸಿದ ಪೊಲೀಸರಿಗೆ ಕವಿರಾಜ್ ಮತ್ತವನ ಗ್ಯಾಂಗ್ ಅಪಹರಿಸಿರುವುದು ತಿಳಿದು ಬಂದಿದ್ದು, ಕಾರ್ಯಾಚರಣೆ ಕೈಗೊಂಡು ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರಿಗೆ ಇಂದು ಬೆಳಗ್ಗೆ ಬೈಯ್ಯಪ್ಪನಹಳ್ಳಿ ಬಳಿ ಇಂದು ಮುಂಜಾನೆ 5ರ ವೇಳೆ ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಹಲಸೂರು ಉಪವಿಭಾಗದ ಎಸಿಪಿ ಕುಮಾರ್, ಇಂದಿರಾನಗರ ಠಾಣೆಯ ಇನ್ಸ್ ಪೆಕ್ಟರ್ ಹರೀಶ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಲು ಮುಂದಾದಾಗ ಪೊಲೀಸ್ ವಾಹನ ಕಂಡು ಪರಾರಿಯಾಗಲು ಯತ್ನಿಸಿ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅವು ಇಬ್ಬರ ಕಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಇಬ್ಬರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗಳ ಹಲ್ಲೆಯಿಂದ ಗಾಯಗೊಂಡಿರುವ ಎಎಸ್ ಐ ಗೋವಿಂದರಾಜು, ಮುಖ್ಯ ಪೇದೆ ವಿಜಯ್ ಕುಮಾರ್ ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು ಗುಂಡೇಟು ತಿಂದಿರುವ ಆರೋಪಿಗಳು ಚೇತರಿಸಿಕೊಂಡ ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ

Join Whatsapp
Exit mobile version