Home ಟಾಪ್ ಸುದ್ದಿಗಳು ಪೊಲೀಸ್ ಎನ್ ಕೌಂಟರ್: ಪುತ್ರನ ಮೃತದೇಹ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ತಂದೆ

ಪೊಲೀಸ್ ಎನ್ ಕೌಂಟರ್: ಪುತ್ರನ ಮೃತದೇಹ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ತಂದೆ

ಲಡಾಕ್: ಪೊಲೀಸ್ ಎನ್ ಕೌಂಟರ್ ನಲ್ಲಿ ಸಾವಿಗೀಡಾಗಿರುವ ತಮ್ಮ ಪುತ್ರ ಅಮಿರ್ ಮಗ್ರೆ ಅವರ ಹೂಳಲ್ಪಟ್ಟಿರುವ ಕಳೇಬರವನ್ನು ಹೊರತೆಗೆದು ಅಂತ್ಯ ಸಂಸ್ಕಾರ ನೆರವೇರಿಸಲು ತಮಗೆ ನೀಡುವಂತೆ ಭಾರತ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮೃತರ ತಂದೆಯು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಹೈದರ್ಪೋರಾದಲ್ಲಿ ಕಳೆದ ನವೆಂಬರ್ 15ರಂದು ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಅಮಿರ್ ಮೆಗ್ರೆ ಸೇರಿದಂತೆ ನಾಲ್ವರು ಅಸುನೀಗಿದ್ದರು.

ಮೃತ ಪುತ್ರನ ಅಂತ್ಯ ಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಲು ಪುತ್ರನ ಕಳೇಬರ ಕೊಡಿಸಲು ಮನವಿ ಮಾಡಿರುವ ತಂದೆಯು “ನನ್ನ ಮನೆಯ ಸಮೀಪ ಪುತ್ರನ ಅಂತ್ಯಸಂಸ್ಕಾರ ನೆರವೇರಿಸಲು ಉದ್ದೇಶಿಸಿದ್ದೇನೆ. ಇದರಿಂದ ಆಗಾಗ್ಗೆ ಸಮಾಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಅನುಕೂಲವಾಗಲಿದೆ” ಎಂದು ಮನವಿಯಲ್ಲಿ ಹೇಳಿದ್ದಾರೆ.

“ಎನ್ಕೌಂಟರ್ ಆದ ಬಳಿಕ ಅಂತಿಮ ಬಾರಿಗೆ ಪುತ್ರನ ಮುಖ ನೋಡಲು ನಮಗೆ ಪ್ರತಿವಾದಿಗಳು ಅವಕಾಶ ಮಾಡಿಕೊಟ್ಟಿಲ್ಲ” ಎಂದು ಅರ್ಜಿದಾರ ತಂದೆ ಮನವಿಯಲ್ಲಿ ಆಪಾದಿಸಿದ್ದಾರೆ.

ಪೊಲೀಸ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಡಾ. ಮುದಾಸ್ಸಿರ್ ಗುಲ್ ಮತ್ತು ಅಲ್ತಾಫ್ ಭಟ್ ಅವರ ಹೂಳಲ್ಪಟ್ಟ ಕಳೇಬರವನ್ನು ನವೆಂಬರ್ 18ರಂದು ಪ್ರತಿವಾದಿಗಳು ತೆಗೆದು ಸಂತ್ರಸ್ತರ ಮನೆಯವರಿಗೆ ಹಸ್ತಾಂತರಿಸಿದ್ದಾರೆ. ಆದರೆ, ಪುತ್ರ ಅಮಿರ್ ಮಗ್ರೆ ಅವರ ಕಳೇಬರದ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಪುತ್ರನ ಮೃತದೇಹವನ್ನು ಹಸ್ತಾಂತರಿಸಲು ಪ್ರತಿವಾದಿಗಳು ನಿರಾಕರಿಸಿದ್ದಾರೆ ಎಂದು ಅರ್ಜಿದಾರ ತಂದೆ ದೂರಿದ್ದಾರೆ.

“ಅಮಿರ್ ಮತ್ತು ಡಾ. ಮುದಾಸಿರ್ ಗುಲ್ ಅವರು ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದರು ಎಂದು ಪ್ರತಿವಾದಿಗಳು ಹೇಳಿದ್ದಾರೆ. ಆದರೆ, ಆ ಬಳಿಕ ಡಾ. ಮುದಾಸಿರ್ ಅವರ ಹೂಳಲ್ಪಟ್ಟ ಕಳೇಬರವನ್ನು ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಡಾ. ಮುದಾಸಿರ್ ಅವರ ಕಳೇಬರವನ್ನು ಹಸ್ತಾಂತರಿಸಿರಬೇಕಾದರೆ ಮುದಾಸ್ಸಿರ್ ಅವರ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಮಿರ್ ಕಳೇಬರವನ್ನು ಏಕೆ ಹಸ್ತಾಂತರಿಸುತ್ತಿಲ್ಲ” ಎಂದು ಅರ್ಜಿದಾರರು ಮನವಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

“ಜೀವಂತವಾಗಿರುವ ವ್ಯಕ್ತಿಗೆ ನೀಡಲಾಗುವ ಗೌರವದಂತೆ ಸಾವನ್ನಪ್ಪಿರುವ ವ್ಯಕ್ತಿಯ ಕಳೇಬರಕ್ಕೆ ಘನತೆಯುತವಾಗಿ ವಿದಾಯ ಹೇಳುವ ದೃಷ್ಟಿಯಿಂದ ಮೃತ ದೇಹವನ್ನು ಹಸ್ತಾಂತರಿಸಲು ಸರ್ಕಾರವು ಕ್ರಮಕೈಗೊಳ್ಳಬೇಕು” ಎಂದು ವಕೀಲೆ ದೀಪಿಕಾ ಸಿಂಗ್ ರಜಾವತ್ ಅವರ ಮೂಲಕ ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ.

ಘನತೆಯಿಂದ ಜೀವಿಸುವ ಹಕ್ಕು ಸಾವಿನ ಬಳಿಕವೂ ಅನ್ವಯಿಸುತ್ತದೆ. ಹೀಗಾಗಿ, ವಿಧಿವತ್ತಾಗಿ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದು ಕಾಮನ್ ಕಾಸ್ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸೇರಿದಂತೆ ಹಲವು ಪ್ರಕರಣಗಳನ್ನು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ವಿಧಿವತ್ತಾದ ಅಂತ್ಯಸಂಸ್ಕಾರವು ಮೂಲಭೂತ ಹಕ್ಕಾಗಿದ್ದು, ಕುಟುಂಬಸ್ಥರ ಬೇಡಿಕೆಯಂತೆ ಧಾರ್ಮಿಕ ನಿಯಮಗಳ ಅನ್ವಯ ಅಂತ್ಯ ಸಂಸ್ಕಾರ ನಡೆಸಬೇಕು ಎಂದು ಆಶ್ರಯ್ ಅಧಿಕಾರ್ ಅಭಿಯಾನ್ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ನೀಡಲಾಗಿರುವ ತೀರ್ಪನ್ನೂ ಮನವಿಯು ಆಧರಿಸಿದೆ.

ಘಟನೆಯ ಹಿನ್ನೆಲೆ

ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ ನಾಲ್ವರ ಪೈಕಿ ಮಗ್ರೆ ಒಳಗೊಂಡು ಇಬ್ಬರು ಉಗ್ರರಾಗಿದ್ದು, ಇನ್ನಿಬ್ಬರು ಹೊರಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದರು. ಆದರೆ, ಇದನ್ನು ನಿರಾಕರಿಸಿದ್ದ ಕುಟುಂಬಸ್ಥರು ಸಾವಿಗೀಡಾದವರು ಮುಗ್ಧರು ಎಂದಿದ್ದಾರೆ. ಸಂತ್ರಸ್ತ ಕುಟುಂಬದವರ ಪ್ರತಿಭಟನೆ ಮತ್ತು ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ನವೆಂಬರ್ 18ರಂದು ಮ್ಯಾಜಿಸ್ಟೇರಿಯಲ್ ತನಿಖೆಗೆ ಆದೇಶಿಸಿದ್ದರು.


(ಕೃಪೆ: ಬಾರ್ & ಬೆಂಚ್)

Join Whatsapp
Exit mobile version