ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಗುರಿಯಾಗಿಸಿ ನೀಡಿರುವ ವಿವಾದಾತ್ಮಕ ಹೇಳಿಕೆ ಸಂಬಂಧ ಹಾಸ್ಯ ನಟ ಕುನಾಲ್ ಕಾಮ್ರಾ ವಿರುದ್ಧ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.
ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕಾಮ್ರಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಕಾಮ್ರಾ ಸದ್ಯ ಮುಂಬೈನಲ್ಲಿ ಇಲ್ಲ ಎಂದು ತಿಳಿದು ಬಂದಿದೆ.
ಆದರೆ ಕಾಮ್ರಾ ಅವರು ವಿಚಾರಣೆಗೆ ಹಾಜರಾಗಿದ್ದಾರೆಯೇ, ಇಲ್ಲವೇ ಎಂಬುವುದರ ಬಗ್ಗೆ ಸದ್ಯ ಮಾಹಿತಿ ಲಭ್ಯವಾಗಿಲ್ಲ.
ಏಕನಾಥ ಶಿಂದೆ ಅವರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆಯಾಚಿಸುವುದಿಲ್ಲ ಎಂದು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಹೇಳಿದ್ದಾರೆ. ಮುಂಬೈನಲ್ಲಿ ಹಾಸ್ಯ ಕಾರ್ಯಕ್ರಮ ನಡೆದ ಸ್ಥಳದ ವಿಧ್ವಂಸಕ ಕೃತ್ಯವನ್ನು ಖಂಡಿಸಿದ್ದಾರೆ.ಸೋಮವಾರ ತಡರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾನು ಕ್ಷಮೆಯಾಚಿಸುವುದಿಲ್ಲ. ಬೆದರಿಕೆ ಹಾಕುತ್ತಿರುವ ಗುಂಪಿಗೆ ನಾನು ಹೆದರುವುದಿಲ್ಲ. ನಾನು ನನ್ನ ಹಾಸಿಗೆಯ ಕೆಳಗೆ ಅಡಗಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಅಜಿತ್ ಪವಾರ್ ಅವರು ಏಕನಾಥ ಶಿಂದೆ ಕುರಿತಂತೆ ಹೇಳಿದ್ದನ್ನೇ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.