Home ಟಾಪ್ ಸುದ್ದಿಗಳು ಮಕ್ಕಳಿಂದ ಬೈಕ್ ಕಳವು ಮಾಡಿಸಿ ಮಾರಾಟ ಮಾಡಿಸುತ್ತಿದ್ದ ಪೊಲೀಸ್ ಕಾನ್ಸ್ ಸ್ಟೆಬಲ್ ಬಂಧನ

ಮಕ್ಕಳಿಂದ ಬೈಕ್ ಕಳವು ಮಾಡಿಸಿ ಮಾರಾಟ ಮಾಡಿಸುತ್ತಿದ್ದ ಪೊಲೀಸ್ ಕಾನ್ಸ್ ಸ್ಟೆಬಲ್ ಬಂಧನ

ಬೆಂಗಳೂರು: ಅಪ್ರಾಪ್ತರ ಮೂಲಕ ಬೈಕ್ ಕಳ್ಳತನ ಮಾಡಿಸುತ್ತಿದ್ದ ಪೊಲೀಸ್ ಕಾನ್ಸ್ ಸ್ಟೆಬಲ್ ಒಬ್ಬನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊನ್ನಪ್ಪ ಅಲಿಯಾಸ್ ರವಿ ಬಂಧಿತ ಆರೋಪಿಯಾಗಿದ್ದು ಆತನ ಜೊತೆ ವಶಕ್ಕೆ ಪಡೆದಿರುವ ಇಬ್ಬರು ಅಪ್ರಾಪ್ತರಿಂದ 77 ಲಕ್ಷ ಮೌಲ್ಯದ 53 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.


2016ರ ಬ್ಯಾಚ್ ನ ಸಿವಿಲ್ ಕಾನ್ಸ್ ಸ್ಟೇಬಲ್ ಆಗಿರುವ ಹೊನ್ನಪ್ಪ ಅಲಿಯಾಸ್ ರವಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಎರವಲು ಸೇವೆ (ಒಒಡಿ) ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಚಾಲಕನಾಗಿದ್ದ.
ಆರೋಪಿ ರವಿ ಅಪ್ರಾಪ್ತ ಯುವಕರನ್ನು ಬಳಸಿಕೊಂಡು ಬೆಂಗಳೂರು, ಬೆಂಗಳೂರು ಹೊರವಲ, ಹಾವೇರಿ, ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿಸುತ್ತಿದ್ದ. ಬಳಿಕ ಬೈಕ್ ಮಾರಾಟ ಮಾಡಿ ಬಂದ ಹಣದಲ್ಲಿ 5ರಿಂದ 6ಸಾವಿರ ರೂಗಳನ್ನು ಆರೋಪಿಗಳಿಗೆ ನೀಡುತ್ತಿದ್ದ.


ಆರೋಪಿ ಪೇದೆ ಜೊತೆಯಲ್ಲಿ ರಾಜಸ್ಥಾನ ಮೂಲಕ ರಮೇಶ್ ಹಾಗೂ ಮತ್ತಿಬ್ಬರು ಅಪ್ರಾಪ್ತರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಈವರೆಗೆ ಮಾರಾಟ ಮಾಡಿರುವ ಒಟ್ಟು 53 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಗಡಿ ರಸ್ತೆಯ ಮನೆಯೊಂದರ ಮುಂಭಾಗ ಕಳೆದ ಅ.28ರಂದು ಮಧ್ಯಾಹ್ನ 1ರ ವೇಳೆ ಬಜಾಜ್ ಪಲ್ಸರ್ ಬೈಕ್ ಕಳವು ಮಾಡಿದ ಪ್ರಕರಣವು ಮಾಗಡಿ ರಸ್ತೆ ಠಾಣೆಯಲ್ಲಿ ದಾಖಲಾಗಿತ್ತು.


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸಿಪಿ ಕೆ.ನಂಜುಂಡೇಗೌಡ ನೇತೃತ್ವದ ಇನ್ಸ್ ಪೆಕ್ಟರ್ ಶ್ರೀನಿವಾಸ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬಂಧಿತ ಪೊಲೀಸಪ್ಪನ ಕೃತ್ಯ ಬಯಲಾಗಿದೆ ಎಂದರು. ಆರೋಪಿಗಳು ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ವಾಹನಗಳ ನಂಬರ್ ಪ್ಲೇಟ್ ಗಳನ್ನು ಬದಲಿಸಿ ನಕಲಿ ಆರ್.ಸಿ ಕಾರ್ಡ್ಗಳನ್ನು ಮಾಡಿ ಆ ವಾಹನಗಳನ್ನು ಬೆಂಗಳೂರು ನಗರ, ರಾಣಿಬೆನ್ನೂರು, ಹಾವೇರಿ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು.

Join Whatsapp
Exit mobile version