► ‘ಊಹಾಪೋಹದ ಸುದ್ದಿಗಳಿಗೆ ಕಿವಿಗೊಡಬೇಡಿ’
ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾರಿಕ್ ನ ವಿಚಾರಣೆಯೇ ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆರೋಪಿ ಮುಹಮ್ಮದ್ ಶಾರಿಕ್ ಹಾಗೂ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಚಿಕಿತ್ಸೆ ಪಡೆಯುತ್ತಿರುವ ಫಾದರ್‌ಮುಲ್ಲರ್ಸ್ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾರಿಕ್‌ಗೆ ಚಿಕಿತ್ಸೆ ಮುಂದುವರಿದಿದ್ದು , ಇದುವರೆಗೂ ಆತನನ್ನು ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಯಾವುದೇ ಊಹಾಪೋಹದ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
‘ಆರೋಪಿಯನ್ನು ಕಮಿಷನರ್ ವಿಚಾರಣೆ ನಡೆಸಿದರು . ತನಿಖಾಧಿಕಾರಿ ವಿಚಾರಣೆ ನಡೆಸಿದ್ದಾರೆ . ಆತ ಕೆಲವೊಂದು ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದ ಎಂಬ ಸುದ್ದಿಗಳು ಕೆಲವು ಮಾಧ್ಯಮಗಳಲ್ಲಿ ಹಾಗೂ ಜಾಲತಾಣ ಗಳಲ್ಲಿ ಪ್ರಸಾರವಾಗಿದೆ . ಇವೆಲ್ಲಾ ಕೇವಲ ಊಹಾಪೋಹದ ಸುದ್ದಿಗಳಾಗಿವೆ. ಇದಕ್ಕೆಲ್ಲಾ ಕಿವಿಗೊಡಬೇಡಿ’ ಎಂದು ಅವರು ಹೇಳಿದ್ದಾರೆ.
ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಆರೋಪಿಯ ಭದ್ರತೆಗೆ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ . ಯಾವುದೇ ಅಚಾತುರ್ಯ ಆಗಬಾರದು ಎಂದು ಭದ್ರತೆ ಒದಗಿಸಿದ್ದೇವೆ . ವೈದ್ಯರ ತಂಡವನ್ನು ಆಸ್ಪತ್ರೆ ವತಿಯಿಂದಲೇ ನಿಯೋಜಿಸಿದ್ದೇವೆ. ಅಲ್ಲದೇ ಚಿಕಿತ್ಸಾ ಕೊಠಡಿಗೆ ಪೊಲೀಸ್ ಭದ್ರತೆಯನ್ನೂ ಒದಗಿಸಿದ್ದು , ಅಧಿಕಾರಿಗಳು ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಪಿಯ ಗುರುತು ಪತ್ತೆ ಮಾಡಲು ಆತನ ಕುಟುಂಬದವರಿಗೆ ಒಮ್ಮೆ ಮಾತ್ರ ಅವಕಾಶ ನೀಡಲಾಗಿತ್ತು . ಅದು ಬಿಟ್ಟರೆ , ಆರೋಪಿಯ ಭೇಟಿಗೆ ವೈದ್ಯರನ್ನು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಬಂದಾಗಲೂ ಅವರಿಗೂ ಆರೋಪಿಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಶಶಿಕುಮಾರ್ ತಿಳಿಸಿದರು .
ಆರೋಪಿಯ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ದೃಢೀಕರಿಸುವವರೆಗೆ ಆತನ ವಿಚಾರಣೆ ಸಾಧ್ಯವಿಲ್ಲ. ದೃಢಪಡಿಸದ ಸುದ್ದಿಯನ್ನು ಬಿತ್ತಿರಿಸುವ ಮೂಲಕ ಯಾರೂ ಗೊಂದಲ ಮೂಡಿಸಬಾರದು’ ಎಂದು ಅವರು ಮನವಿ ಮಾಡಿದರು.