Home ಟಾಪ್ ಸುದ್ದಿಗಳು ಟೋಲ್ ಗೇಟ್ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ: ಸಿಪಿಐಎಂ ಖಂಡನೆ

ಟೋಲ್ ಗೇಟ್ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ: ಸಿಪಿಐಎಂ ಖಂಡನೆ

ಬೆಂಗಳೂರು: ಮಂಗಳೂರು ಪ್ರದೇಶದ ಸುರತ್ಕಲ್ ಟೋಲ್ ಗೇಟ್ ಮೂಲಕ ಕಳೆದ ಆರು ವರ್ಷಗಳಿಂದ ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿರುವ ನವಯುಗ ಕಂಪನಿಯ ಟೋಲ್ ಗೇಟ್ ತೆರವುಗೊಳಿಸುವಂತೆ ಮತ್ತು ತಕ್ಷಣದಿಂದಲೇ ಟೋಲ್ ಸಂಗ್ರಹ ನಿಲ್ಲಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಗಾರರ ಮೇಲೆ ಪೊಲೀಸ್ ದಬ್ಬಾಳಿಕೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ತೀವ್ರವಾಗಿ ಖಂಡಿಸಿದೆ.

ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ರಾಜ್ಯ ಸರಕಾರದ ದುರ್ನಡೆಯನ್ನು ಖಂಡಿಸಿದ್ದಾರೆ. ಅಲ್ಲದೆ, ಈ ಕೂಡಲೇ ಬಂಧಿಸಿರುವ ಎಲ್ಲ ನಾಗರೀಕರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಒಪ್ಪಂದವನ್ನು ಉಲ್ಲಂಘಿಸಿ ಸಾರ್ವಜನಿಕರಿಂದ ದಬ್ಬಾಳಿಕೆಯ ಮೂಲಕ ಟೋಲ್ ವಸೂಲಿ ಮಾಡುತ್ತಿರುವ ನವಯುಗ ಕಂಪನಿಯ ಲೂಟಿಯನ್ನು ತಡೆಯುವ ಬದಲು, ಲೂಟಿಯನ್ನು ತಡೆಯಲು ಯತ್ನಿಸಿದ ಸಾರ್ವಜನಿಕರ ಮೇಲೆ ಪೊಲೀಸ್ ದಬ್ಬಾಳಿಕೆಗೆ ಕ್ರಮವಹಿಸಿರುವ ಸರಕಾರದ ನಡೆಯು ನಾಚಿಕೆಗೇಡಿನದಾಗಿದ್ದು, ಅಕ್ಷಮ್ಯವಾಗಿದೆ. ಇದು ಸ್ಪಷ್ಟವಾಗಿ ಲೂಟಿಕೋರ ಕಂಪನಿಯ ಜೊತೆಗಿನ ಸರಕಾರದ ಶಾಮೀಲಾತಿಯನ್ನು ಎತ್ತಿ ತೋರಿಸುತ್ತಿದೆಯೆಂದು ಸಿಪಿಐ(ಎಂ) ಕುಟುಕಿದೆ.

ಹೆಜಮಾಡಿ ಟೋಲ್ ಗೇಟ್ ಮೂಲಕ ಸಂಗ್ರಹ ಆರಂಭಗೊಂಡ ಕೂಡಲೇ ಸುರತ್ಕಲ್ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕೆಂಬ ಒಪ್ಪಂದವಿದ್ದರೂ, 2016ರಿಂದ ಇಲ್ಲಿಯವರೆಗೆ ಅಕ್ರಮವಾಗಿ ಸಾರ್ವಜನಿಕರಿಂದ ನೂರಾರು ಕೋಟಿ ಸಂಗ್ರಹಿಸಲು ಬಿಟ್ಟಿರುವುದೇ ಸರಕಾರದ ದೊಡ್ಡ ಅಪರಾಧವಾಗಿದೆ. ಈ ಖಾಸಗಿ ಕಂಪನಿಯಿಂದ ಅಕ್ರಮವಾಗಿ ಸಂಗ್ರಹಿಸಲಾದ ಒಟ್ಟು ಮೊತ್ತವನ್ನು ರಾಜ್ಯ ಸರಕಾರ ಈ ಕೂಡಲೇ ವಶಪಡಿಸಿಕೊಳ್ಳಲು ಮತ್ತು ತಕ್ಷಣದಿಂದಲೇ ಸುರತ್ಕಲ್ ನ ಟೋಲ್ ಸಂಗ್ರಹವನ್ನು ನಿಲ್ಲಿಸಲು ಸಿಪಿಐ(ಎಂ) ಒತ್ತಾಯಿಸಿದೆ.

ಇಷ್ಟೊಂದು ದೊಡ್ಡ ಪ್ರಮಾಣದ ಸಾರ್ವಜನಿಕ ದರೋಡೆ ನಡೆಯುತ್ತಿದ್ದರೂ, ಸದಾ ಭಾವಾನಾತ್ಮಕ ವಿಷಯಗಳನ್ನಿಟ್ಟುಕೊಂಡು ಜನತೆಯನ್ನು ಒಡೆದಾಳುವ ಸಂಕುಚಿತ ರಾಜಕಾರಣ ಮಾಡುವ ಬಿಜೆಪಿ ನಾಯಕರು, ಈ ವಿಚಾರದಲ್ಲಿ ತಮ್ಮ ಸರಕಾರಕ್ಕೆ ಛೀಮಾರಿ ಹಾಕಿ, ಅಕ್ರಮ ಸಂಗ್ರಹವನ್ನು ತಡೆಯುವ ಬದಲು ಮೌನ ವಹಿಸಿರುವುದು ಅವರ ಜನ ವಿರೋಧಿ ನೀತಿಯನ್ನು ಮತ್ತೊಮ್ಮೆ ಬಯಲುಗೊಳಿಸುತ್ತಿದೆ ಎಂದು ಸಿಪಿಐ(ಎಂ) ವಿವರಿಸಿದೆ.

ಅಕ್ರಮವನ್ನು ತಡೆಯಲು ಹೋರಾಟದಲ್ಲಿ ತೊಡಗಿದ ನಾಗರೀಕರು ಮತ್ತು ಪ್ರಗತಿಪರ ಸಂಘ ಸಂಸ್ಥೆಗಳನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಅಭಿನಂದಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version