ಮುಸ್ಲಿಮ್ ಯುವಕನ ಮೇಲೆ ಪೊಲೀಸ್ ಕ್ರೌರ್ಯ: ಬೆಂಗಳೂರಿನ ಮೂವರು ಕಾನ್ ಸ್ಟೇಬಲ್ ಗಳ ಅಮಾನತು

Prasthutha|

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಕ್ರೂರವಾಗಿ ಥಳಿಸಿ ಕೈ ಕಳೆದುಕೊಳ್ಳುವಂತೆ ಮಾಡಿದ ಆರೋಪದಡಿ ವರ್ತೂರು ಪೊಲೀಸ್ ಠಾಣೆಯ ಮೂವರು ಕಾನ್ ಸ್ಟೇಬಲ್ ಗಳನ್ನು ಅಮಾನತು ಮಾಡಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಆದೇಶಿಸಿದ್ದಾರೆ.

- Advertisement -


ಮನೆಗಳ್ಳತನ ಪ್ರಕರಣವೊಂದರ ಸಂಬಂಧ ಸಲ್ಮಾನ್ ಖಾನ್ ಎಂಬಾತನನ್ನು ವಿಚಾರಣೆಗೆ ಕರೆ ತಂದಿದ್ದ ವರ್ತೂರು ಪೊಲೀಸರು ಮೂರು ದಿನಗಳ ಕಾಲ ಅಕ್ರಮವಾಗಿ ಠಾಣೆಯಲ್ಲಿ ಕೂಡಿಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಬಳಿಕ ಆತನ ಮನೆಯವರು ಠಾಣೆಗೆ ಬಂದಾಗ ಹಣದ ಬೇಡಿಕೆ ಇಡಲಾಗಿತ್ತು. ಕೊನೆಗೆ ಸಲ್ಮಾನ್ ನನ್ನು ಮನೆಗೆ ಕಳಿಸಿದಾಗ ನಡೆದಾಡಲಾರದ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಿದರು. ಕೈಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಕೈ ಕತ್ತರಿಸಬೇಕಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದರು.

ಅದರಂತೆ ಆತನ ಬಲಗೈಯನ್ನು ಕತ್ತರಿಸಲಾಗಿತ್ತು. ಈ ಬಗ್ಗೆ ಸಂತ್ರಸ್ತ ಕುಟುಂಬ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗೆ ದೂರು ನೀಡಿತ್ತು. ದೂರಿನನ್ವಯ ಕೈಗೊಂಡ ತನಿಖೆಯಲ್ಲಿ ಮೇಲ್ನೊಟಕ್ಕೆ ಸರಿಯಾಗಿ ಕಾನೂನು ಪಾಲನೆ ಮಾಡದಿರುವ ಬಗ್ಗೆ ಗೊತ್ತಾಗಿದ್ದು ಕ್ರಮ ಕೈಗೊಳ್ಳಲಾಗಿದೆ.

- Advertisement -


ನನ್ನ ಮಗನನ್ನು ಯಾವುದೋ ಕಳ್ಳತನದ ಸುಳ್ಳು ಆರೋಪದಲ್ಲಿ ಸಿಲುಕಿಸಿ ಮಾರಣಾಂತಿಕವಾಗಿ ಹೊಡೆದಿದ್ದಾರೆ. ಇದರಿಂದಾಗಿ ಆತನ ಬಲಗೈಗೆ ಭಾರಿ ಪೆಟ್ಟು ಬಿದ್ದು, ರಕ್ತ ಹೆಪ್ಪುಗಟ್ಟಿತ್ತು. ತಕ್ಷಣವೇ ಸಲ್ಮಾನ್ ನನ್ನು ವೈದೇಹಿ ಆಸ್ಪತ್ರೆಗೆ ಸೇರಿಸಿದ್ದೆವು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹಾಸ್ಮಟ್ ಆಸ್ಪತ್ರೆಗೆ ಸೇರಿಸಿದ್ದೆವು. ಆಗ ಸಲ್ಮಾನ್ ಕೈ ಪರಿಶೀಲಿಸಿದ ವೈದ್ಯರು, ಕೈಗೆ ದೊಡ್ಡ ಪ್ರಮಾಣದ ಏಟು ಬಿದ್ದಿದ್ದು, ಕೀವು ತುಂಬಿದೆ. ಜೊತೆಗೆ ರಕ್ತ ಹೆಪ್ಪುಗಟ್ಟಿದೆ. ಇದರಿಂದ ಕೈ ಕತ್ತರಿಸಬೇಕು ಎಂದು ಹೇಳಿದರು. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಕೈ ಕತ್ತರಿಸಲಾಗಿದೆ. ಈ ಚಿಕಿತ್ಸೆಗೆ ಎರಡೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದರು.

Join Whatsapp