Home ಟಾಪ್ ಸುದ್ದಿಗಳು ಅಪಹರಣ 2 ಕಿ.ಮೀ ವರೆಗೆ ಬೆನ್ನಟ್ಟಿ ಆರೋಪಿಯನ್ನು ಬಂಧಿಸಿ ಯುವಕನನ್ನು ರಕ್ಷಿಸಿದ ಪೊಲೀಸರು

ಅಪಹರಣ 2 ಕಿ.ಮೀ ವರೆಗೆ ಬೆನ್ನಟ್ಟಿ ಆರೋಪಿಯನ್ನು ಬಂಧಿಸಿ ಯುವಕನನ್ನು ರಕ್ಷಿಸಿದ ಪೊಲೀಸರು

►ಅಪಹರಣಕ್ಕೊಳಗಾದ ತೌಹೀದ್’ನ ರಕ್ಷಣೆ

ಬೆಂಗಳೂರು: ಯುವಕನನ್ನು ಅಪಹರಿಸಿ ತಡರಾತ್ರಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಅಪಹರಣಕಾರರನ್ನು 2 ಕಿಲೋ ಮೀಟರ್’ಗಳಷ್ಟು ದೂರ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಯುವಕನ ರಕ್ಷಿಸುವ ಜೊತೆಗೆ ಓರ್ವ ಅರೋಪಿಯನ್ನು ಬಂಧಿಸುವಲ್ಲಿ ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಗೋಪಿ ಪೊಲೀಸರಿಗೆ ಸೆರೆ ಸಿಕ್ಕ ಆರೋಪಿ. ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಮೂವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ. ಅಪಹರಣಕ್ಕೊಳಗಾದ ತೌಹೀದ್’ನನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಡಿಸಿಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.


ಇನ್ಸ್’ಪೆಕ್ಟರ್ ಮಂಜುನಾಥ್ ರಾತ್ರಿ ಪಾಳಿಯಲ್ಲಿ ಕೋರಮಂಗಲದ 100 ಅಡಿ ರಸ್ತೆಯ ಚೆಕ್ ಪೋಸ್ಟ್’ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ರಾತ್ರಿ 11.40ರ ಸುಮಾರಿಗೆ ವೇಗವಾಗಿ ಬಂದ ಹೋಂಡಾ ಸಿಟಿ ಕಾರೊಂದು ಬ್ಯಾರಿಕೇಡ್’ಗೆ ಗುದ್ದಿದೆ. ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದಾಗ ಕಾರಿನಲ್ಲಿದ್ದ ತೌಹಿದ್ ಕಾಪಾಡಿ…ಕಾಪಾಡಿ ಎಂದು ಕೂಗಿದ್ದಾನೆ. ಅಪಹರಣವಾಗಿರುವ ಮುನ್ಸೂಚನೆ ಅರಿತ ಇನ್ಸ್’ಪೆಕ್ಟರ್ ಮಂಜುನಾಥ್, ಪೊಲೀಸ್ ಜೀಪ್’ನಲ್ಲಿ ಆರೋಪಿಗಳ ಕಾರನ್ನು 2 ಕಿ.ಮೀ.ವರೆಗೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದಾರೆ.


ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಆರೋಪಿಗಳ ಕಾರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರು ಆರೋಪಿಗಳಲ್ಲಿ ಮೂವರು ಪರಾರಿಯಾಗಿದ್ದು, ಗೋಪಿ ಎಂಬಾತ ಸಿಕ್ಕಿಬಿದ್ದಿದ್ದಾನೆ. ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ತೌಹೀದ್’ನನ್ನು ಕಿಡ್ನಾಪ್ ಮಾಡಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.


ಕಾದು ಕುಳಿತಿದ್ದ ಕುಟುಂಬ:
ಕಳೆದ ಮೂರು ದಿನಗಳ ಹಿಂದೆ ತೌಹಿದ್’ನನ್ನು ಆರೋಪಿಗಳು ಬಂಡೆಪಾಳ್ಯದಲ್ಲಿ ಅಪಹರಿಸಿ ಗೌಪ್ಯ ಸ್ಥಳದಲ್ಲಿಟ್ಟಿದ್ದರು. ಯುವಕನ ಕುಟುಂಬಸ್ಥರಿಗೆ ಕರೆ ಮಾಡಿ 60 ಸಾವಿರ ರೂ ನೀಡಿದರೆ ಬಿಟ್ಟು ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು.


ಪೊಲೀಸರಿಗೆ ಅಪಹರಣ ವಿಚಾರ ತಿಳಿಸಿದರೆ, ಕೊಲೆ ಮಾಡುವುದಾಗಿಯೂ ಹೆದರಿಸಿದ್ದರು. ಹೀಗಾಗಿ, ನಿನ್ನೆ ಸಂಜೆ ತೌಹಿದ್ ತಾಯಿ 35 ಸಾವಿರ ಹಣವನ್ನು ಆರೋಪಿಗಳಿಗೆ ನೀಡಿದ್ದರು. ಹಣ ಕೊಟ್ಟ ಮೇಲೂ ಆರೋಪಿಗಳು ತೌಹಿದ್’ನನ್ನು ಬಿಟ್ಟು ಕಳುಹಿಸಿರಲಿಲ್ಲ. ಹೀಗಾಗಿ, ಮಡಿವಾಳ ಪೊಲೀಸ್ ಠಾಣೆಗೆ ತಡರಾತ್ರಿ ದೂರು ನೀಡಲು ಕುಟುಂಬ ಆಗಮಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಪೋಷಕರಿಗೆ ವಶಕ್ಕೆ:
ಆಡುಗೋಡಿ ಪೊಲೀಸರು ಆರೋಪಿಗಳ ಸಂಚು ಅರಿತು ಸೂಕ್ತ ಕಾರ್ಯಾಚರಣೆ ನಡೆಸುವ ಮೂಲಕ ಯುವಕನನ್ನು ರಕ್ಷಿಸಿ ಮಡಿವಾಳದಲ್ಲಿದ್ದ ಪೋಷಕರಿಗೆ ಒಪ್ಪಿಸಿದ್ದಾರೆ.
ತೌಹಿದ್ ಕೂಡ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಈತನ ವಿರುದ್ಧ ಸಹ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಬಂಡೆಪಾಳ್ಯ ಪೊಲೀಸರ ವಶದಲ್ಲಿರುವ ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಇನ್ನಷ್ಟು ಮಾಹಿತಿ ತಿಳಿಯಲಿದೆ.

Join Whatsapp
Exit mobile version