ಮಂಗಳೂರು: ವಿವಾದದ ಕೇಂದ್ರ ಬಿಂದುವಾದ ಮಂಗಳೂರು ತಾಲೂಕಿನ ಗಂಜಿಮಠ ಬಳಿಯ ಮಳಲಿ ಮಸೀದಿ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
ಮೇ 24ರ ರಾತ್ರಿ 8 ಗಂಟೆಯಿಂದ ಮೇ 26ರ ಬೆಳಿಗ್ಗೆ 8 ಗಂಟೆವರೆಗೆ ಐಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ.
ನಿಷೇಧಾಜ್ಞೆಯು ಸದ್ಯ ತಾತ್ಕಾಲಿಕವಾಗಿ ತಡೆಯಾಜ್ಞೆಗೆ ಒಳಗಾಗಿರುವ ಮಳಲಿ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ವಿಧಿಸಲಾಗಿದೆ. ಕಾಚಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡುತಡಮೆ ರಸ್ತೆ ಪ್ರದೇಶಗಳನ್ನು ಸಂಪೂರ್ಣ ನಿಷೆಧೀತ ಪ್ರದೇಶಗಳೆಂದು ಘೋಷಿಸಲಾಗಿದೆ.
ನಿಷೇಧಾಜ್ಞೆ ಸಮಯದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪುಗೂಡುವುದು, ದೊಣ್ಣೆ, ಶಸ್ತ್ರಾಸ್ತ್ರ, ಕತ್ತಿ, ಬಂದೂಕು, ಚಾಕು, ಕೋಲು, ಲಾಠಿಗಳನ್ನು ಕೊಂಡೊಯ್ಯುವುದು ಹಾಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ಕಮೀಷನರ್ ನೀಡಿದ್ದಾರೆ.
ಮೇ 25ರ ಬೆಳಿಗ್ಗೆ ಸ್ಥಳೀಯ ರಾಮಾಂಜನೇಯ ಮಂದಿರದಲ್ಲಿ ಸಂಘಪರಿವಾರದ ಸಂಘಟನೆಗಳು ಮಸೀದಿಯ ಪೂರ್ವಾಪರ ಕುರಿತಾಗಿ ತಾಂಬೂಲ ಪ್ರಶ್ನೆಗೆ ನಿರ್ಧರಿಸಿದೆ.