►► ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವದಂತಿ
►► ರಿಪಬ್ಲಿಕ್ ಟಿವಿ, ಡಿ.ಎನ್.ಎ, ಝೀ ಬ್ಯುಸಿನೆಸ್ ಗಳಲ್ಲಿ ‘ಪೊಗ್ಬ ನಿವೃತ್ತಿ’ ಸುದ್ದಿ
ಮ್ಯಾಂಚಸ್ಟರ್ ಯುನೈಟೆಡ್ ನ ತಾರೆ ಪೌಲ್ ಪೊಗ್ಬ ಫುಟ್ಬಾಲ್ ತ್ಯಜಿಸಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರೊಂದಿಗೆ ಜಗತ್ತಿನಾದ್ಯಂತ ಫುಟ್ಬಾಲ್ ಅಭಿಮಾನಿಗಳು ಆಘಾತಗೊಂಡಿದ್ದರು.
ಭಾರತದಲ್ಲಿ ‘ರಿಪಬ್ಲಿಕ್ ಟಿವಿ’, ‘ಡಿ.ಎನ್.ಎ’, ಝೀ ಬ್ಯುಸಿನೆಸ್, ಒಳಗೊಂಡಂತೆ ಹಲವು ಮಾಧ್ಯಮಗಳು ತಮ್ಮ ವೆಬ್ ಸೈಟ್ ಗಳಲ್ಲಿ ವರದಿಯನ್ನು ಪ್ರಕಟಿಸಿದ್ದವು. ಆದರೆ ಇದೊಂದು ವದಂತಿಯಷ್ಟೇ ಎಂದು ಪೊಗ್ಬ ತನ್ನ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಫ್ರಾನ್ಸ್ ಅಧ್ಯಕ್ಷರ ಇಸ್ಲಾಮೋಫೋಬಿಕ್ ಹೇಳಿಕೆಗಳಿಗಾಗಿ ಪೊಗ್ಬೊ ಫ್ರಾನ್ಸ್ ತಂಡಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮ ಹಾಗೂ ಕೆಲವು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.
ವದಂತಿಯು ಉಂಟುಮಾಡುತ್ತಿರುವ ಪರಿಣಾಮವನ್ನು ಮನಗಂಡ ಪೊಗ್ಬ, ತನ್ನ ಅಧಿಕೃತ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ತಾನು ಫ್ರಾನ್ಸ್ ತಂಡದ ಪರ ಆಡುವುದನ್ನು ತೊರೆದಿಲ್ಲ ಎಂದು ಪ್ರಕಟಿಸಿದ್ದಾರೆ. ಮತ್ತು ಇಂತಹ ವರದಿಯೊಂದಕ್ಕೆ ‘ಸುಳ್ಳು ಸುದ್ದಿ’ ಎಂಬ ಲೇಬಲ್ ಹಾಕಿದ ಇಮೇಜನ್ನು ಇನ್ ಸ್ಟಾಗ್ರಾಂ ನಲ್ಲಿ ಪ್ರಕಟಿಸಿದ್ದಾರೆ.