Home ಟಾಪ್ ಸುದ್ದಿಗಳು ತುಮಕೂರಿನಲ್ಲಿ ಮೋದಿ ಕಾರ್ಯಕ್ರಮ| ಕುಡಿಯಲು ನೀರು, ಆಹಾರಕ್ಕಾಗಿ ಪೊಲೀಸರ ಪರದಾಟ

ತುಮಕೂರಿನಲ್ಲಿ ಮೋದಿ ಕಾರ್ಯಕ್ರಮ| ಕುಡಿಯಲು ನೀರು, ಆಹಾರಕ್ಕಾಗಿ ಪೊಲೀಸರ ಪರದಾಟ

ತುಮಕೂರು: ನಾಳೆ (ಫೆ.6) ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಕುಡಿಯಲು ನಿರು, ಆಹಾರಕ್ಕಾಗಿ ಪರದಾಡಿದ ಘಟನೆ ವರದಿಯಾಗಿದೆ.

 ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ತುಮಕೂರು ಎಸ್​ಪಿ ಸೇರಿದಂತೆ ಒಟ್ಟು 6 ಎಸ್​ಪಿಗಳು ಭದ್ರತೆಯ ನೇತೃತ್ವ ವಹಿಸಿದ್ದು, 19 ಡಿವೈಎಸ್​ಪಿ, 119 ಸಿಪಿಐ, 239 ಪಿಎಸ್​ಐ, 1202 ಎಎಸ್​ಐ, ಹೆಡ್​​ಕಾನ್ಸ್​ಟೇಬಲ್, 400 ಕಾನ್ಸ್​ಟೇಬಲ್, ಹೋಮ್​ಗಾರ್ಡ್, 14 ಡಿಎಆರ್ ಮತ್ತು 12 ಕೆಎಸ್​ಆರ್​ಪಿ ತುಕಡಿ ನಿಯೋಜಿಸಲಾಗಿದೆ. ಒಟ್ಟಾರೆಯಾಗಿ 2ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಆದರೆ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾದ ಪೊಲೀಸರಿಗೆ ಸರಿಯಾದ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಅನ್ನ ಮತ್ತು ನೀರಿಗಾಗಿ ಸಿಬ್ಬಂದಿ ಪರದಾಡುವಂತಾಯಿತು.

ಮೋದಿ ಅವರು ಬಿದರೆಹಳ್ಳ ಕಾವಲ್‌ನಲ್ಲಿ ಹೆಚ್‌ಎಎಲ್‌ ನೂತನ ಘಟಕ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ಭದ್ರತೆಗಾಗಿ 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆದರೆ ಕಾರ್ಯಕ್ರಮದ ಆಯೋಜಕರು ಸಿಬ್ಬಂದಿಗಳಿಗೆ ಊಟ, ನೀರಿನ ವ್ಯವಸ್ಥೆ ಸರಿಯಾಗಿ ಮಾಡದ ಪರಿಣಾಮ ನಿನ್ನೆ ರಾತ್ರಿಯಿಂದಲೂ ಸಿಬ್ಬಂದಿ ಸರಿಯಾಗಿ ಊಟ ಸಿಗದೆ ಪರದಾಟ ನಡೆಸಿದ್ದಾರೆ. ಅಲ್ಲದೆ, ಊಟದ ಪೊಟ್ಟಣ, ನೀರು ಪಡೆಯಲು ಪೊಲೀಸ್ ಸಿಬ್ಬಂದಿ ಮುಗಿಬಿದ್ದಿದ್ದಾರೆ.

ಎರಡು ದಿನದಿಂದ ಭದ್ರತೆಗಾಗಿ ನಿಯೋಜನೆಗೊಂಡಿರುವ ಪೊಲೀಸರು ಬಿಸಿಲಿನಲ್ಲಿ ನಿಂತಿದ್ದರೂ ಕನಿಷ್ಠ ನೀರಿನ ವ್ಯವಸ್ಥೆ ಕೂಡ ಮಾಡದೆ ಆಯೋಜಕರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  

Join Whatsapp
Exit mobile version