Home ಟಾಪ್ ಸುದ್ದಿಗಳು ರಾಜ್ಯಕ್ಕೆ ಪ್ರಧಾನಿ ಮೋದಿ: ಪ್ರತಿಭಟನೆಯ ಸ್ವಾಗತ ಕೋರಲು ರೈತರು ಸಜ್ಜು

ರಾಜ್ಯಕ್ಕೆ ಪ್ರಧಾನಿ ಮೋದಿ: ಪ್ರತಿಭಟನೆಯ ಸ್ವಾಗತ ಕೋರಲು ರೈತರು ಸಜ್ಜು

ಮೈಸೂರು: ಇದೇ ತಿಂಗಳು 21 ಮತ್ತು 22 ರಂದು ರಾಜ್ಯ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಭಟನೆಯೊಂದಿಗೆ ಸ್ವಾಗತ ಕೋರಲು ರಾಜ್ಯ ಕಬ್ಬು ಬೆಳೆಗಾರರ ಸಂಘವು ಸಜ್ಜಾಗಿದೆ. ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದು, ಇದೆ ವೇಳೆ ರೈತರ ಬೆಳೆಗಳಿಗೆ ಬೆಲೆ ಖಾತರಿ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿರುವ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಪ್ರಧಾನಿ ಮೋದಿ ಮೈಸೂರು ಭೇಟಿಯ ವೇಳೆ ಗಾಂಧಿ ಪುತ್ಥಳಿ ಬಳಿ ತರಕಾರಿ, ಹಣ್ಣು, ದವಸ, ಧಾನ್ಯ ಮಾರಾಟ ಮಾಡುವ ಮೂಲಕ ಗಮನ ಸೆಳೆದು ಕ್ರಮಯೋಗಿಗಳ ಕಾಯಕ ದಿನವನ್ನು ಆಚರಿಸುತ್ತೇವೆ ಎಂದು ಹೇಳಿದ್ದಾರೆ.


ನರೆಂದ್ರ ಮೋದಿ ಅಧಿಕಾರ ಸ್ವೀಕರಿಸುವ ಮೊದಲು ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಹೇಳಿದ್ದರು, ಆದರೆ ಸುಪ್ರೀಂಕೋರ್ಟ್ ನಲ್ಲಿ ವರದಿ ಜಾರಿ ಅಸಾಧ್ಯ ಎಂದು ಅಫಿಡವಿಟ್ ಸಲ್ಲಿಸಿರುವುದು ನಮಗೆ ಬೇಸರ ತರಿಸಿದೆ, ಅಲ್ಲದೇ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ನೀಡಿದ್ದ ಭರವಸೆಯನ್ನು ಕೂಡ ಪ್ರಧಾನಿ ಮೋದಿ ಈಡೇರಿಸಲಿಲ್ಲ ಎಂದು ಶಾಂತಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ,

Join Whatsapp
Exit mobile version