Home ಟಾಪ್ ಸುದ್ದಿಗಳು ಮೋದಿಗೆ ದಮ್ಮು, ತಾಕತ್ತಿದ್ದರೆ ಈಡೇರಿಸಿದ ಭರವಸೆಗಳ ಪಟ್ಟಿ ನೀಡಲಿ: ಸಿಎಂ ಸಿದ್ದರಾಮಯ್ಯ

ಮೋದಿಗೆ ದಮ್ಮು, ತಾಕತ್ತಿದ್ದರೆ ಈಡೇರಿಸಿದ ಭರವಸೆಗಳ ಪಟ್ಟಿ ನೀಡಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರಿಗೆ ದಮ್ಮು ಮತ್ತು ತಾಕತ್ತಿದ್ದರೆ ಹಿಂದಿನ ಎರಡು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಗಳ ಪೈಕಿ ಎಷ್ಟು ಈಡೇರಿಸಲಾಗಿದೆ ಎಂಬ ಲೆಕ್ಕವನ್ನು ಮತದಾರರ ಮುಂದಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.


ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕುರಿತು ‘ಎಕ್ಸ್’ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಭಾರತೀಯ ಜನತಾ ಪಕ್ಷ ಕಾದು ಕಾದು ಅಳೆದು ತೂಗಿ ಕೊನೆಗೂ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಪತ್ರವನ್ನು ಬಿಡುಗಡೆ ಮಾಡಿದೆ. ಅದರೊಳಗೇನಿದೆ ಎಂದು ಇಣುಕಿದರೆ ದೊಡ್ಡ ಚೊಂಬು ಮಾತ್ರ ಕಾಣುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.


‘ನಾನು ನುಡಿದಂತೆ ನಡೆದವನು. ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮಾಡಿದ ಕೆಲಸದ ಲೆಕ್ಕವನ್ನು ಜನರ ಮುಂದೆ ಇಟ್ಟಿದ್ದೆ. ಈ ಬಾರಿಯೂ ಈ ಕೆಲಸ ಮುಂದುವರಿಸುತ್ತಿದ್ದೇನೆ. ಈ ಕಾರಣಕ್ಕೆ ನರೇಂದ್ರ ಮೋದಿಯವರಲ್ಲಿ ಲೆಕ್ಕ ಕೇಳುವ ನೈತಿಕ ಅಧಿಕಾರ ನನಗಿದೆ ಎಂದು ತಿಳಿದುಕೊಂಡಿದ್ದೇನೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.


‘ಮೋದಿ ಅವರೇ, ಪ್ರಧಾನಮಂತ್ರಿ ‘ಸೂರ್ಯ ಘರ್ ಮುಫ್ತ್ ಬಿಜಲಿ’ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸುತ್ತೇವೆ ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ. ವಾಸ್ತವ ಸಂಗತಿ ಏನೆಂದರೆ, ಈ ಯೋಜನೆಯನ್ನು ಕಳೆದ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಇದು ಸಂಪೂರ್ಣ ಉಚಿತ ಅಲ್ಲ. 1 ಕಿಲೋ ವ್ಯಾಟ್ ಉತ್ಪಾದಿಸುವ ರೂಫ್ಟಾಪ್ ಸೋಲಾರ್ ಪ್ಯಾನೆಲ್ಗೆ ₹50,000 ವೆಚ್ಚವಾಗುತ್ತದೆ. ಇದರಲ್ಲಿ ಶೇ 40ರಷ್ಟು ಹಣವನ್ನು ಖರೀದಿಸುವ ಕುಟುಂಬವೇ ಭರಿಸಬೇಕಾಗುತ್ತದೆ. ಬ್ಯಾಂಕ್ಗಳಿಂದ ಸಾಲ ಕೊಡಿಸಲಾಗುತ್ತಿದೆ. ಅಂದರೆ ಸೋಲಾರ್ ಪ್ಯಾನೆಲ್ ಅಳವಡಿಸುವ ವೆಚ್ಚದ ಹೊರೆ ಬಡ ಕುಟುಂಬದ ಮೇಲೆ ಹೊರಿಸಲಾಗಿದೆ. ಇದು ಯಾವ ಸೀಮೆಯ ಉಚಿತ ಹೇಳಿ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


‘70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ಸೇವೆ ವಿಸ್ತರಿಸಲಾಗುವುದು ಎನ್ನುವುದು ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆ. ವಾಸ್ತವ ಸಂಗತಿ ಎಂದರೆ, ಆಯುಷ್ಮಾನ್ ಯೋಜನೆಯ ಆರೋಗ್ಯ ವಿಮೆಯಲ್ಲಿ ಅಕ್ರಮ ನಡೆದಿರುವುದನ್ನು ಸಿಎಜಿಯೇ ವರದಿ ಮಾಡಿದೆ. 8.2 ಲಕ್ಷ ರೋಗಿಗಳು ಆಧಾರ್, ಬಯೋಮೆಟ್ರಿಕ್ ದಾಖಲೆಗಳಿಲ್ಲದೆ ಎರಡಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆ ಪಡೆದಿದ್ದನ್ನು ವರದಿ ಗುರುತಿಸಿತ್ತು. ನಕಲಿ ವಿಮೆಗಳಿಗೆ ₹1,697 ಕೋಟಿವರೆಗೆ ಸರ್ಕಾರದಿಂದ ಹಣ ನೀಡಲಾಗಿದೆ’ ಎಂದು ಅವರು ಟೀಕಿಸಿದ್ದಾರೆ.


ಈ ಬಾರಿಯ ಲೋಕಸಭೆ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಶುಕ್ರವಾರ 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಅದೇ ರಾಜ್ಯದಲ್ಲಿ ಏಪ್ರಿಲ್ 26ರಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

Join Whatsapp
Exit mobile version