ಹೈದರಾಬಾದ್: ಪ್ರಧಾನಿ ಮೋದಿ ಸಾರ್ವಜನಿಕರ ಹಣವನ್ನು ಯುವಜನರ ಉದ್ಯೋಗ ಸೃಷ್ಟಿಗೆ ಬಳಸುವ ಬದಲು ತಮ್ಮ ಪ್ರಚಾರ ಹಾಗೂ ಜಾಹೀರಾತಿಗೆ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಮೋದಿ ಅವರು ಗರ್ಭ ಗುಡಿಯಲ್ಲಿ ಏಕಾಂಗಿಯಾಗಿ ಪೂಜೆ ನೆರವೇರಿಸಿದರು. ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ಇರಲಿಲ್ಲ. ತಮ್ಮ ಸಂಪುಟದ ಸಚಿವರು ಅಲ್ಲಿಗೆ ಬರುವುದಕ್ಕೂ ಮೋದಿ ಸಮ್ಮತಿಸಲಿಲ್ಲ. ಅವರು ಅಲ್ಲಿ ಒಬ್ಬರೇ ಇದ್ದರು. ದೇವರು ದೇಶದ ಎಲ್ಲ ಮನೆಗಳಲ್ಲೂ ಇದ್ದಾರೆ. ಆದರೆ, ಮೋದಿ ಅವರು ದೇವರು ತನ್ನ ಸನಿಹ ಇದ್ದಾನೆ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಹಸಿದವರಿಗೆ ಅನ್ನ ಕೊಡಬೇಕು. ನಿರುದ್ಯೋಗಿಗೆ ಉದ್ಯೋಗ ಕೊಡಬೇಕು. ಆದರೆ, ಮೋದಿ ಅವರು ತಮ್ಮ ಸಮಯವನ್ನು ರಾಜಕಾರಣ ಮತ್ತು ಪ್ರಚಾರಕ್ಕೆ ಬಳಸುತ್ತಿದ್ದಾರೆ. ಜನರ ಹಣದಲ್ಲಿ ಅವರು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ‘ ಎಂದು ಖರ್ಗೆ ಟೀಕಿಸಿದರು.