Home ಟಾಪ್ ಸುದ್ದಿಗಳು ಪ್ರಧಾನಿಗೆ ತಮ್ಮ ನಿಂದನೆಯ ಸಂಖ್ಯೆ ಗೊತ್ತು, ನಿರುದ್ಯೋಗಿಗಳ ಸಂಖ್ಯೆ ಗೊತ್ತಿಲ್ಲ: ಡಾ. ಪರಕಾಲ ಪ್ರಭಾಕರ್

ಪ್ರಧಾನಿಗೆ ತಮ್ಮ ನಿಂದನೆಯ ಸಂಖ್ಯೆ ಗೊತ್ತು, ನಿರುದ್ಯೋಗಿಗಳ ಸಂಖ್ಯೆ ಗೊತ್ತಿಲ್ಲ: ಡಾ. ಪರಕಾಲ ಪ್ರಭಾಕರ್

ಬೆಂಗಳೂರು: ಪ್ರಧಾನಿ ಮೋದಿ ತಮ್ಮ ರಾಜಕೀಯ ವಿರೋಧಿಗಳು 99 ಬಾರಿ ತಮ್ಮನ್ನು ನಿಂದಿಸಿದ್ದರು ಎಂದು ಹೇಳುತ್ತಾರೆ. ಆದರೆ ದೇಶದಲ್ಲಿ ಎಷ್ಟು ನಿರುದ್ಯೋಗಿಗಳಿದ್ದಾರೆ. ಕೋವಿಡ್ ಸಮಯದಲ್ಲಿ ಎಷ್ಟು ಜನರು ಪ್ರಾಣ ಕಳೆದುಕೊಂಡರು ಎಂಬಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದರು.


‘ಜಾಗೃತ ಕರ್ನಾಟಕ’ ಬುಧವಾರ ಹಮ್ಮಿಕೊಂಡಿದ್ದ ‘2014ರ ನಂತರದ ಭಾರತದ ಭ್ರಮೆ ಮತ್ತು ವಾಸ್ತವ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಕೇಂದ್ರ ಸರಕಾರ ಪ್ರತಿ ವಿಚಾರ, ಕ್ಷೇತ್ರಗಳ ಬಗೆಗಿನ ವಾಸ್ತವವನ್ನು ಜನರಿಗೆ ತಿಳಿಸದೆ, ಭ್ರಮೆಗಳನ್ನು ಸೃಷ್ಟಿಸುತ್ತಿದೆ.ಅದರಲ್ಲೂ ದೇಶ ಯುವ ಜನತೆ ಪೈಕಿ ಶೇ.24ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇದು ಪ್ರಪಂಚದಲ್ಲೇ ಹೆಚ್ಚಾಗಿದ್ದು, ಇರಾನ್, ಲೆಬನಾನ್, ಸಿರಿಯಾ ದೇಶಗಳಿಗಿಂತೂ ಹೆಚ್ಚು ಜನ ಇಲ್ಲಿ ನಿರುದ್ಯೋಗ ಸಮಸ್ಯೆಗೆ ಸಿಲುಕಿದ್ದಾರೆ. ನೆರೆಯ ಬಾಂಗ್ಲಾದೇಶದ ನಿರುದ್ಯೋಗದ ಪ್ರಮಾಣವೂ ಬರೀ ಶೇ.12ರಷ್ಟು ಇದೆ. ಆದರೂ, ಕೇಂದ್ರ ಸರಕಾರ ಈ ವಾಸ್ತವವನ್ನು ಮರೆಮಾಚಿ, ಆರ್ಥಿಕತೆಯಲ್ಲಿ ನಮ್ಮ ದೇಶ ಮುಂದುವರಿಯುತ್ತಿದೆ ಎಂಬ ಭ್ರಮೆ ಹರಡಲಾಗುತ್ತಿದೆ ಎಂದು ಅವರು ಟೀಕಿಸಿದರು.


ಕೇಂದ್ರ ಸರ್ಕಾರ ತಂತ್ರಗಳ ಮೂಲಕ ಸುಳ್ಳುಗಳನ್ನೇ ಸತ್ಯ ಮಾಡುತ್ತಿದೆ. ಒಂದು ಕಿ.ಮೀ ಚತುಷ್ಪದ ರಸ್ತೆಯನ್ನು ನಾಲ್ಕು ಕಿ.ಮೀ ಎಂದು, ಹಸಿವಿನ ಸೂಚ್ಯಂಕದಲ್ಲಿ ಭಾರತ 142 ಸ್ಥಾನದಲ್ಲಿದ್ದರೂ ದೇಶದಲ್ಲಿ ಒಬ್ಬರೂ ಹಸಿವಿನಿಂದ ಬಳಲುತ್ತಿಲ್ಲವೆಂದು ಮೋದಿ ಅವರ ಸಂಪುಟದ ಸಚಿವರೇ ಹೇಳುತ್ತಾರೆ. ದೊಡ್ಡ ಮಾತುಗಳು, ಸಂಸ್ಕೃತ ಬಳಕೆಯ ಮೂಲಕ ಸತ್ಯ ಜನರಿಗೆ ಅರ್ಥವಾಗದಂತೆ ಮಾಡುತ್ತಾರೆ. ಜನರಿಗೆ ಹಸಿವೇ ಇಲ್ಲದ ಮೇಲೆ 83 ಕೋಟಿ ಜನರಿಗೆ ಐದು ವರ್ಷಗಳು ಆಹಾರ ಧಾನ್ಯ ಪೂರೈಸುತ್ತಿದ್ದೇವೆ ಎನ್ನುವುದು ಸುಳ್ಳೇ ಎಂದು ಪ್ರಶ್ನಿಸಿದರು.

Join Whatsapp
Exit mobile version