Home ಟಾಪ್ ಸುದ್ದಿಗಳು ಕಾಶ್ಮೀರದ ಸರ್ವಪಕ್ಷ ಸಭೆ ಕರೆದ ಪ್ರಧಾನಿ; ಸಭೆಗೆ ಹಾಜರಾಗಲು ಗುಫ್ಕರ್ ಮೈತ್ರಿಕೂಟ ಒಪ್ಪಿಗೆ

ಕಾಶ್ಮೀರದ ಸರ್ವಪಕ್ಷ ಸಭೆ ಕರೆದ ಪ್ರಧಾನಿ; ಸಭೆಗೆ ಹಾಜರಾಗಲು ಗುಫ್ಕರ್ ಮೈತ್ರಿಕೂಟ ಒಪ್ಪಿಗೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 24ರಂದು ಜಮ್ಮು ಮತ್ತು ಕಾಶ್ಮೀರದ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಗುಫ್ಕರ್ ಮೈತ್ರಿಕೂಟದ ನಾಯಕರು ಕೂಡಾ ಈ ಸಭೆಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ ಅವರೇ ಶ್ರೀನಗರದಲ್ಲಿ ನಡೆದ ಗುಫ್ಕರ್ ಸಭೆಗೂ ಮುನ್ನ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಗುಫ್ಕರ್ ನಾಯಕರು ಪ್ರಧಾನಿ ಸಭೆಯಲ್ಲಿ ಭಾಗವಹಿಸಲಿದ್ದು, ಮೋದಿ ಮತ್ತು ಗೃಹ ಸಚಿವರ ಮುಂದೆ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಗುಫ್ಕರ್ ನಾಯಕಿ ಮೆಹಬೂಬಾ ಮುಫ್ತಿ, ಸಭೆಗೆ ಹೋಗುವ ಮುನ್ನವೇ ದೆಹಲಿಗೆ ಹೋಗಿ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ. 35ಎ ವಿಧಿ ಮತ್ತು 370ನೇ ವಿಧಿ ಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವುದು ಸೇರಿದಂತೆ ರಾಜಕೀಯ ಪ್ರಕ್ರಿಯೆಗಳನ್ನು ಬಲಪಡಿಸುವ ಕೇಂದ್ರದ ಯೋಜನೆಯ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಬಳಿ ಜೂನ್ 24ರಂದು ಪ್ರಧಾನಿ ಚರ್ಚೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ 14 ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.

Join Whatsapp
Exit mobile version