ಪುತ್ತೂರು: ಇಲ್ಲಿನ ಕೊಂಬೆಟ್ಟು ಕಾಲೇಜಿನಲ್ಲಿ ABVP ಕಾರ್ಯಕರ್ತರು ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ನಡೆಸಿದ ಮಾರಣಾಂತಿಕ ದಾಳಿಯನ್ನು ಪಾಪ್ಯುಲರ್ ಫ್ರಂಟ್ ದ.ಕ. ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ತೀವ್ರವಾಗಿ ಖಂಡಿಸಿದ್ದು, ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದರ ಬಗ್ಗೆ ಎಲ್ಲಾ ಪೋಷಕರು ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಹೇಳಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಹಾಗೂ ಸಂಘಪರಿವಾರದ ಇತರ ನಾಯಕರು, ವಾರದ ಹಿಂದೆ ಪುತ್ತೂರಿನ ಕೊಂಬೆಟ್ಟು ಕಾಲೇಜಿನ ವಿದ್ಯಾರ್ಥಿಗಳನ್ನು ಸಮೀಪದ ದೇವಸ್ಥಾನದ ಪ್ರಾಂಗಣದಲ್ಲಿ ಒಟ್ಟು ಸೇರಿಸಿ ಸಭೆ ನಡೆಸಿದ್ದರು. ಇಂದು ಎಬಿವಿಪಿ ಕಾರ್ಯಕರ್ತರು ಕಾಲೇಜು ವಿದ್ಯಾರ್ಥಿಗಳ ಮೇಲೆ ನಡೆಸಿದ ದಾಳಿಗೆ ಈ ಪ್ರಚೋದನೆ ಪ್ರಮುಖ ಕಾರಣವಾಗಿದೆ. ಇದು ಕೊಂಬೆಟ್ಟು ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳನ್ನು ಗುರಿಪಡಿಸಿಕೊಂಡು ಒಂದು ವಾರದೊಳಗಾಗಿ ನಡೆಸಲಾಗುತ್ತಿರುವ ನಾಲ್ಕನೇ ದಾಳಿಯಾಗಿದೆ. ಪೆನ್ನು ಪುಸ್ತಕ ಹಿಡಿಯಬೇಕಾದ ಕೈಗಳು ತ್ರಿಶೂಲದಂತಹ ಮಾರಕಾಸ್ತ್ರಗಳನ್ನು ಬಳಸುತ್ತಿರುವುದು ಆಘಾತಕಾರಿಯಾಗಿದೆ.
ಈ ಘಟನೆಯ ಹಿಂದಿನ ಸೂತ್ರದಾರರನ್ನು ಕೂಡಲೇ ಬಂಧಿಸಬೇಕು. ವಿದ್ಯಾರ್ಥಿಗಳ ತಲೆಯಲ್ಲಿ ಕೋಮುದ್ವೇಷ ತುಂಬಿ ಹಿಂಸಾಕೃತ್ಯಗಳಿಗೆ ಪ್ರಚೋದಿಸುವ ಸಂಘಪರಿವಾರದ ನಾಯಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕುಂಟು ಮಾಡುವ ಇಂತಹ ಘಟನೆಗಳು ಮರುಕಳಿಸದಂತೆ ಗಮನಹರಿಸಬೇಕೆಂದು ಇಜಾಝ್ ಅಹ್ಮದ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.