ಮಂಗಳೂರು: ಸಂಘಪರಿವಾರ ತ್ರಿಶೂಲ ದೀಕ್ಷೆ ನಡೆಸಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಅಹಿತಕರ ಘಟನೆ ಹೆಚ್ಚಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯ ಮೌನ ಸಮಾಜಘಾತುಕರಿಗೆ ಇನ್ನಷ್ಟು ಪ್ರಚೋದನೆ ನೀಡಿದಂತಿದೆ. ತ್ರಿಶೂಲ ದೀಕ್ಷೆ ಕಾನೂನು ಬದ್ಧವೇ ಅಥವಾ ಕಾನೂನುಬಾಹಿರವೇ ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತ್ರಿಶೂಲ ದೀಕ್ಷೆ ವಿತರಣೆ ನಡೆದು ಒಂದು ತಿಂಗಳು ಕಳೆದಿದೆ. ಇದುವರೆಗೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಗಳಲ್ಲಿ ತ್ರಿಶೂಲ ಬಳಸಿರುವುದು ದೃಢಪಟ್ಟಿದೆ. ಆದ್ದರಿಂದ ತ್ರಿಶೂಲ ವಿತರಿಸಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪೊಲೀಸರು ಯಾರದೋ ಒತ್ತಡಕ್ಕೆ ಮಣಿದು ಮೌನವಹಿಸಿದ್ದಾರೆ. ಪೊಲೀಸರ ಮೌನ ಇಂತಹ ದುಷ್ಕೃತ್ಯಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಮತ್ತು ಮಹಿಳಾ ಸಬ್ ಇನ್ಸ್ ಪೆಕ್ಟರ್ ಅವರಿಗೆ ಬಹಿರಂಗ ಬೆದರಿಕೆ ಹಾಕಿದ ಬಗ್ಗೆ ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಲು ಪೊಲೀಸರು ಇದುವರೆಗೆ ಧೈರ್ಯ ತೋರಿಲ್ಲ. ಸ್ವತಃ ಜಿಲ್ಲಾಧಿಕಾರಿ ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸದ ಪೊಲೀಸರು ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದಾರೆ, ಹೀಗಾದರೆ ಜನಸಾಮಾನ್ಯರು ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸ ಕಳೆದುಕೊಳ್ಳುವುದಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ನಾಗಬನ ಧ್ವಂಸ ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರನ್ನು ಅಭಿನಂದಿಸಿರುವ ಎ.ಕೆ. ಅಶ್ರಫ್, ದುಷ್ಕರ್ಮಿಗಳಿಗೆ ಯಾವುದೇ ಧರ್ಮವಿಲ್ಲ ಎನ್ನುವುದು ಸಾಬೀತಾಗಿದೆ. ನಾಗಬನ ಧ್ವಂಸ ವಿಚಾರದಲ್ಲಿ ಮುಸ್ಲಿಮರನ್ನು ಗುರಿಪಡಿಸಲಾಗಿತ್ತು. ಮುಸ್ಲಿಮ್ ಮಾಲಕರ ಬಸ್ ಗಳಿಗೆ ಕಲ್ಲು ತೂರಾಟ ನಡೆಸಲಾಗಿತ್ತು. ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪುತ್ತೂರು, ಬೆಳ್ತಂಗಡಿ ಸೇರಿ ಹಲವೆಡೆ ನಡೆದ ಹಲ್ಲೆ ಪ್ರಕರಣಗಳಲ್ಲಿ ತ್ರಿಶೂಲ ಬಳಸಲಾಗಿದೆ. ಪೊಲೀಸ್ ಇಲಾಖೆ ಇಂತಹ ದುಷ್ಕೃತ್ಯ ತಡೆಯಲು ಯಾಕಾಗಿ ಮುಂದಾಗುತ್ತಿಲ್ಲ..? ಎಂದು ಪ್ರಶ್ನಿಸಿದ ಅವರು, ಪೊಲೀಸ್ ಇಲಾಖೆ ಆಡಳಿತ ಪಕ್ಷದ ಗುಲಾಮಗಿರಿ ಮಾಡಬಾರದು. ಇದೇ ರೀತಿ ಪೊಲೀಸರು ನಿರ್ಲಕ್ಷ್ಯ ಧೋರಣೆ ತಾಳಿದರೆ ಪೊಲೀಸರ ವಿರುದ್ಧ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಅವರು ಎಚ್ಚರಿಸಿದರು.
ಪಾಪ್ಯುಲರ್ ಫ್ರಂಟ್ ದ.ಕ. ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡಿ ತಿಂಗಳು ಕಳೆದರೂ, ಇದರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಯುವಕರಿಗೆ ತ್ರಿಶೂಲ ವಿತರಣೆ ಮಾಡಿದ ವಿರುದ್ಧ ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದಾಗ ಮಂಗಳೂರು ಪೊಲೀಸ್ ಕಮಿಷನರ್ ಅವರು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಪ್ರಕರಣ ದಾಖಲಿಸುವುದಾಗಿ ಭರವಸೆ ನೀಡಿದ್ದರು. ಆದರೆ ತಿಂಗಳು ಕಳೆದರೂ ಕಮಿಷನರ್ ಅವರು ಇದರ ಕುರಿತಾದ ಯಾವುದೇ ವಿಚಾರವನ್ನು ಸಾರ್ವಜನಿಕಗೊಳಿಸಿಲ್ಲ ಎಂದು ದೂರಿದರು.
ಸಂಘಪರಿವಾರದ ಕೋಮು ಪ್ರಚೋದನೆಯಿಂದಾಗಿ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಿಂಸಾಕೃತ್ಯಗಳು ನಡೆದಾಗ ತ್ರಿಶೂಲದ ವಿಚಾರವೂ ಚರ್ಚೆಗೆ ಬರುತ್ತಿದೆ. ಸಂಘಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಮತ್ತು ಇತರ ನಾಯಕರ ಪ್ರಚೋದನೆಯ ಬಳಿಕ ಪುತ್ತೂರಿನ ಕೊಂಬೆಟ್ಟು ಕಾಲೇಜಿನಲ್ಲಿ ಎ.ಬಿ.ವಿ.ಪಿ ವಿದ್ಯಾರ್ಥಿಗಳು ಮುಸ್ಲಿಮ್ ವಿದ್ಯಾರ್ಥಿಗಳಿಗೆ ತ್ರಿಶೂಲದಿಂದ ಇರಿದಿರುವ ವಿಚಾರ ಕೇಳಿಬಂದಿದೆ. ಸಂಘಪರಿವಾರದ ಪ್ರಚೋದನೆಯಿಂದ ಕೊಂಬೆಟ್ಟು ಕಾಲೇಜಿನಲ್ಲಿ ಮುಸ್ಲಿಮ್ ಯುವಕರನ್ನು ಗುರಿಪಡಿಸಿಕೊಂಡು ನಿರಂತರ ದಾಳಿಗಳನ್ನು ನಡೆಸಲಾಗುತ್ತಿದ್ದು, ಇದು ವಾರದೊಳಗೆ ನಡೆದ ನಾಲ್ಕನೇ ದಾಳಿಯಾಗಿದೆ.
ಅದೇ ರೀತಿ, ತ್ರಿಶೂಲ ದೀಕ್ಷೆಯನ್ನು ತಾವು ಸಾಂಕೇತಿಕವಾಗಿ ನಡೆಸಿದ್ದೇವೆ ಎಂದು ಸಂಘಪರಿವಾರದ ಮುಖಂಡರು ಹೇಳಿಕೆ ನೀಡಿದ್ದರಾದರೂ, ಆ ನಂತರದ ದಿನಗಳಲ್ಲಿ ಉಪ್ಪಿನಂಗಡಿಯ ವಳಾಲ್ ಸಮೀಪ ನಡೆದ ಅಪಘಾತದ ವೇಳೆ ದ್ವಿಚಕ್ರವಾಹನದ ಸೀಟಿನ ಹಿಂಬದಿ ತ್ರಿಶೂಲ ಇಟ್ಟಿರುವುದು ಬಹಿರಂಗವಾಗಿತ್ತು. ವಾಹನದಲ್ಲಿ ತ್ರಿಶೂಲವಿಟ್ಟು ಸಾರ್ವಜನಿಕವಾಗಿ ತಿರುಗಾಡುತ್ತಿದ್ದ ಯುವಕರ ದುರುದ್ದೇಶದ ಬಗ್ಗೆ ತನಿಖೆಯಾಗಬೇಕಾಗಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಅಂತಹ ಬೆಳವಣಿಗೆ ಕಂಡು ಬರಲಿಲ್ಲ ಎಂದು ಹೇಳಿದರು.
ಅನೈತಿಕ ಪೊಲೀಸ್ ಗಿರಿಯ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿದ್ದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಕಠಿಣ ಸೆಕ್ಷನ್ ಹಾಕಿ ಜೈಲಿಗೆ ತಳ್ಳುವ ಬದಲು ಅವರಿಗೆ ದುರ್ಬಲ ಸೆಕ್ಷನ್ ಹಾಕಿ ಠಾಣೆಯಲ್ಲಿಯೇ ಜಾಮೀನು ದೊರಕುವಂತೆ ಮಾಡಲಾಯಿತು. ತ್ರಿಶೂಲ ದೀಕ್ಷೆಯ ಬಳಿಕ ಹಿಂಸಾಕೃತ್ಯಗಳಲ್ಲಿ ತ್ರಿಶೂಲ ಬಳಕೆಯ ವಿಚಾರವೂ ಕೇಳಿ ಬಂತು.
ಇದೀಗ ಹಿಂದೂ ಜಾಗರಣ ವೇದಿಕೆಯ ಪ್ರಾಂತಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಸಾಂವಿಧಾನಿಕ ಹುದ್ದೆಯಲ್ಲಿರುವ ಜಿಲ್ಲಾಧಿಕಾರಿಯವರನ್ನು ಕೊರಳಪಟ್ಟಿ ಹಿಡಿದು ಥಳಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದ. ಆ ನಂತರ ಹಿಂಜಾವೇ ಪ್ರಾಂತ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಪುಂಜಲ್ ಕಟ್ಟೆ ಸಬ್ ಇನ್ಸ್ ಪೆಕ್ಟರ್ ಕಾಲು ಮುರಿಯುತ್ತೇನೆಂದು ಬೆದರಿಯೊಡ್ಡಿದ. ಈ ರೀತಿ ಸರಕಾರಿ ಅಧಿಕಾರಿಗಳ ಮೇಲೆ ಬೆದರಿಕೆಯೊಡ್ಡುವಾಗಲೂ, ಸಂಘಪರಿವಾರ ನಾಯಕರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟುವ ಪ್ರಕ್ರಿಯೆ ಕಂಡು ಬರುತ್ತಿಲ್ಲ. ಇಂತಹ ಬೆಳವಣಿಗೆಗಳು ಸಾರ್ವಜನಿಕರು ಕಾನೂನು ಸುವ್ಯಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಲಿದೆ ಎಂದು ಅವರು ಹೇಳಿದರು.
ಸಾಮಾಜಿಕ ಸಾಮರಸ್ಯಕ್ಕೆ ಮಾರಕವಾಗಿರುವ ತ್ರಿಶೂಲ ವಿತರಣೆಯ ವಿರುದ್ಧ ದೂರು ನೀಡಿದ್ದರೂ, ಇನ್ನೂ ಪ್ರಕರಣ ದಾಖಲಿಸಲಾಗಿಲ್ಲ. ಪೊಲೀಸ್ ಇಲಾಖೆ ದೂರು ದಾಖಲಿಸಿಕೊಂಡು ಸಂಘಪರಿವಾರದ ಕಾರ್ಯಕರ್ತರಿಗೆ ನಡೆಸಲಾಗಿರುವ ತ್ರಿಶೂಲ ವಿತರಣೆಯ ಹಿಂದಿನ ಪಿತೂರಿಯನ್ನು ಕೂಡಲೇ ಬಹಿರಂಗಪಡಿಸಬೇಕು. ಗಲಭೆ ಹರಡುವ ನಿಟ್ಟಿನಲ್ಲಿ ಹಿಂಸಾಕೃತ್ಯಗಳಿಗೆ ಬಳಸಲಾಗುತ್ತಿರುವ ತ್ರಿಶೂಲಗಳನ್ನು ಪೊಲೀಸರು ಕೂಡಲೇ ವಶಪಡಿಸಿಕೊಳ್ಳಬೇಕು. ಒಂದು ವೇಳೆ ತ್ರಿಶೂಲ ದೀಕ್ಷೆ ಕಾನೂನುಬದ್ಧವಾಗಿದ್ದರೆ, ಆತ್ಮ ರಕ್ಷಣೆಗಾಗಿ ಅಂತಹ ಮಾರಕಾಸ್ತ್ರಗಳನ್ನು ಜೊತೆಗಿಟ್ಟುಕೊಳ್ಳಲು ಸಾರ್ವಜನಿಕರಿಗೂ ಪೊಲೀಸ್ ಇಲಾಖೆ ಅವಕಾಶ ಮಾಡಿಕೊಡಬೇಕೆಂದು ಇಜಾಝ್ ಅಹ್ಮದ್ ಆಗ್ರಹಿಸಿದರು. ಪಾಪ್ಯುಲರ್ ಫ್ರಂಟ್ ಮಂಗಳೂರು ನಗರ ಅಧ್ಯಕ್ಷ ಖಾದರ್ ಕುಲಾಯಿ, ಪುತ್ತೂರು ಅಧ್ಯಕ್ಷ ಜಾಬಿರ್ ಅರಿಯಡ್ಕ ಉಪಸ್ಥಿತರಿದ್ದರು.