ಬೆಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಇಬ್ಬರು ಕಾರ್ಯಕರ್ತರನ್ನು ಉತ್ತರ ಪ್ರದೇಶ ಪೊಲೀಸರು ಅಕ್ರಮವಾಗಿ ಬಂಧಿಸಿರುವುದನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು.
ಉತ್ತರ ಪ್ರದೇಶ ಪೊಲೀಸರು ಇಬ್ಬರು ಪಿಎಫ್ ಐನ ಇಬ್ಬರು ಕಾರ್ಯಕರ್ತರನ್ನು ಬಂಧಿಸಿ ಕಟ್ಟುಕಥೆ ಸೃಷ್ಟಿಸುತ್ತಿದ್ದಾರೆ ಮತ್ತು ವಿಷಯವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ. ಸಂಘಟನೆಯ ಚಟುವಟಿಕೆಗಳಿಗಾಗಿ ಬಂಗಾಳ ಮತ್ತು ಬಿಹಾರಕ್ಕೆ ತೆರಳಿದ್ದ ಕೇರಳ ಮೂಲದ ಸದಸ್ಯರು ಉತ್ತರ ಪ್ರದೇಶವಾಗಿ ರೈಲು ಮೂಲಕ ಮುಂಬೈಗೆ ಪ್ರಯಾಣಿಸುತ್ತಿದ್ದರು.
ಫೆ.11ರಂದು ಯುಪಿ ಎಸ್.ಟಿ.ಎಫ್. ಇಬ್ಬರನ್ನೂ ಅಕ್ರಮವಾಗಿ ಬಂಧಿಸಿದ್ದು, ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರು ಫೆ.14-15ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕವಷ್ಟೇ ಮಾಧ್ಯಮದ ಹಾಜರುಪಡಿಸಿ ಭಯೋತ್ಪಾದನಾ ದಾಳಿಯ ಕಟ್ಟುಕಥೆಯನ್ನು ಪ್ರಸ್ತುತಪಡಿಸಿದ್ದರು. ಇದು ಸರಕಾರದ ದಮನಕಾರಿ ನೀತಿಗಳ ವಿರುದ್ಧ ಧ್ವನಿ ಎತ್ತುವ ಪಾಪ್ಯುಲರ್ ಫ್ರಂಟನ್ನು ಬೇಟೆಯಾಡುವ ಮುಂದುವರಿದ ಭಾಗವಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿರು.
ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರದಡಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅತ್ಯಾಚಾರ, ಕೊಲೆ, ಕಾನೂನು ಬಾಹಿರ ಹತ್ಯೆಗಳು ನಿರಂತರವಾಗಿವೆ. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಮಾತನಾಡಿದವರನ್ನು ಕರಾಳ ಕಾನೂನಿನಡಿ ಬಂಧಿಸಿ ಜೈಲಿಗಟ್ಟುವ ಪ್ರಕ್ರಿಯೆಗಳೂ ಜಾರಿಯಲ್ಲಿವೆ. ಅಪರಾಧ ನಡೆಸುವ ಸಂಘಪರಿವಾರದ ದುಷ್ಕರ್ಮಿಗಳು ಕಾನೂನಿನ ಭಯವಿಲ್ಲದೇ ನಿರ್ಭೀತರಾಗಿದ್ದಾರೆ ಹಾಗೂ ಯೋಗಿ ಸರಕಾರ ಸ್ವತಃ ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಇಡೀ ಭಾರತ ಮತ್ತೊಂದು ಉತ್ತರ ಪ್ರದೇಶವಾಗುವುದನ್ನು ತಡೆಯಲು ಮತ್ತು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲಾ ಸಂವಿಧಾನ ಪ್ರೇಮಿಗಳು ಯೋಗಿ ಸರಕಾರ ದುರಾಡಳಿತದ ವಿರುದ್ಧ ಧ್ವನಿ ಎತ್ತಬೇಕೆಂದು ಪ್ರತಿಭಟನಕಾರರು ಕರೆ ನೀಡಿದರು.