►ಸ್ಮಶಾನದಲ್ಲಿ ಹೂತಿದ್ದ ಮೃತದೇಹವನ್ನು ಹೊರತೆಗೆದು ಖಬರಸ್ತಾನದಲ್ಲಿ ಅಂತ್ಯಸಂಸ್ಕಾರ ನಡೆಸಿದ ಕಾರ್ಯಕರ್ತರು
ಶಿವಮೊಗ್ಗ: ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಅನಾಥ ಮುಸ್ಲಿಮ್ ಮಹಿಳೆಯ ಅಂತ್ಯಸಂಸ್ಕಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (P.F.I) ಮತ್ತು ನ್ಯಾಷನಲ್ ವಿಮೆನ್ಸ್ ಫ್ರಂಟ್ ಶಿವಮೊಗ್ಗ ಜಿಲ್ಲಾ ಕಾರ್ಯಕರ್ತರು ನೆರವೇರಿಸಿದರು.
ಇದಕ್ಕೂ ಮೊದಲು ವಾರಸುದಾರರು ಇಲ್ಲ ಎಂದು ಮಹಿಳೆಯ ಶವವನ್ನು ಪೊಲೀಸರು ಚಿಕ್ಕಲ್ ನ ಸ್ಮಶಾನದಲ್ಲಿ ಹೂತಿದ್ದರು. ಆದರೆ ಮೃತ ಮಹಿಳೆ ಮುಸ್ಲಿಮ್ ಎಂದು ತಿಳಿಯುತ್ತಿದ್ದಂತೆಯೇ ಪಿಎಫ್ ಐ ಮತ್ತು ಎನ್ ಡಬ್ಲ್ಯು ಎಫ್ ಕಾರ್ಯಕರ್ತರು ಪೊಲೀಸರ ಸಹಕಾರ ಪಡೆದು ಶವವನ್ನು ಹೊರತೆಗೆದು ಮುಸ್ಲಿಮ್ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದರು.
ಕಳೆದ ಐದು ದಿನಗಳ ಹಿಂದೆ ತೀರಾ ಅನಾರೋಗ್ಯದ ಕಾರಣದಿಂದ ಮಹಿಳೆಯೊಬ್ಬರು ಶಿವಮೊಗ್ಗದಲ್ಲಿ ತಲೆ ತಿರುಗಿ ಬಿದ್ದಿದ್ದರು. ತಕ್ಷಣ ಸ್ಥಳೀಯರು ಅವರನ್ನು ಜಿಲ್ಲಾ ಮೆಗ್ಗನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 12ರ ಗುರುವಾರ ಅವರು ಸಾವನ್ನಪ್ಪಿದ್ದರು.
ಈ ವಿಷಯವು ಸಂಬಂಧ ಪಟ್ಟವರನ್ನು ತಿಳಿಸಲು ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಸಾಮಾಜಿಕ ಜಾಲದ ಮೂಲಕ ಸಂದೇಶ ರವಾನಿಸಿದ್ದರು. ವಾರಸುದಾರರು ಇದ್ದರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಆದರೆ ಸಂಬಂಧಪಟ್ಟವರು ಯಾರು ಕೂಡ ಬಂದಿರಲಿಲ್ಲ. ಬಳಿಕ ಪೊಲೀಸರು ಮಹಿಳೆಯ ಶವವನ್ನು ಚಿಕ್ಕಲ್ ನ ಸ್ಮಶಾನದಲ್ಲಿ ಹೂತಿದ್ದರು. ಬಳಿಕ ಮೃತ ಮಹಿಳೆ ಮುಸ್ಲಿಮ್ ಎಂಬುದು ಬೆಳಕಿಗೆ ಬಂದಿತ್ತು.
ಈ ವಿಷಯವನ್ನು ತಿಳಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (P.F.I) ಮತ್ತು ನ್ಯಾಷನಲ್ ವಿಮೆನ್ಸ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಕಾರ್ಯಕರ್ತರು ಪೊಲೀಸ್ ಸಹಯೋಗದೊಂದಿಗೆ ಶವವನ್ನು ಸ್ಮಶಾನದಿಂದ ತೆಗೆಸಿ ಸ್ನಾನ ಮಾಡಿಸಿ, ನಮಾಝ್ ನಿರ್ವಹಿಸಿದ ಬಳಿಕ ಗೋಪಾಲ ಗೌಡ ಬಡಾವಣೆಯ ಅಲ್ ಹರಿಮ್ ಖಬರಸ್ಥಾನದಲ್ಲಿ ಮುಸ್ಲಿಮ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದರು. ಇವರ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.