ನೆರೆಯ ರಾಷ್ಟ್ರಗಳ ಮುಸ್ಲಿಮೇತರ ವಲಸಿಗರಿಂದ ಪೌರತ್ವಕ್ಕಾಗಿ ಅರ್ಜಿ ಆಹ್ವಾನಿಸಿ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಹೊರಡಿಸಿರುವ ವಿವಾದಾತ್ಮಕ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಅವರು ಭಾರತದ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ 2019 ರ ಅಡಿಯಲ್ಲಿ ನಿಯಮಗಳನ್ನು ಇನ್ನೂ ರೂಪಿಸಲಾಗಿಲ್ಲವಾದರೂ, ಮೇ 28 ರಂದು ಗೃಹ ಇಲಾಖೆಯ ಗಜೆಟ್ ಅಧಿಸೂಚನೆಯು ಪ್ರಸ್ತುತ ಗುಜರಾತ್, ರಾಜಸ್ಥಾನ, ಛತ್ತೀಸ್ ಗಢ, ಹರಿಯಾಣ ಮತ್ತು ಪಂಜಾಬ್ ನ 13 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳು, ಸಿಖ್ಖರು, ಜೈನರು, ಕ್ರಿಶ್ಚಿಯನ್ನರು ಮತ್ತು ಬೌದ್ಧರಿಂದ ಪೌರತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಗೃಹ ಇಲಾಖೆಯ ಅಧಿಸೂಚನೆಯು ಹಿಂಬಾಗಿಲ ಮೂಲಕ ಸಿಎಎಯನ್ನು ಜಾರಿಗೆ ತರುವ ಪ್ರಯತ್ನವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ.
ಗೃಹ ಇಲಾಖೆಯ ಈ ಅಧಿಸೂಚನೆಯು ಅಸಂವಿಧಾನಿಕ, ತಾರತಮ್ಯದಿಂದ ಕೂಡಿದ ಮತ್ತು ಭಾರತೀಯ ಸಂವಿಧಾನದ 14 ಅನುಚ್ಚೇದಕ್ಕೆ ವಿರುದ್ಧ ಎಂಬುವುದನ್ನು ಘೋಷಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಅನೀಸ್ ಅಹ್ಮದ್ ಅವರು ಸಲ್ಲಿಸಿರುವ ಪಿಐಎಲ್ ಮನವಿ ಮಾಡಿದೆ. ಏಕೆಂದರೆ ಇದು ಪೌರತ್ವ ಕಾಯ್ದೆ 1955ರ ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ ಮುಸ್ಲಿಮರು ತಮ್ಮ ಧರ್ಮದ ಕಾರಣದಿಂದ ನೋಂದಣಿ ಮತ್ತು ಸಹಜ ಪ್ರಕ್ರಿಯೆಗಳ ಮೂಲಕ ಪೌರತ್ವ ಪಡೆಯುವುದನ್ನು ತಡೆಯುತ್ತದೆ. 1955ರ ಪೌರತ್ವ ಕಾಯ್ದೆಯ ಸೆಕ್ಷನ್ 5 ಮತ್ತು 6ಕ್ಕೆ ವಿರುದ್ಧವಾಗಿ ಹೊರಡಿಸಲಾಗಿರುವ ವಿವಾದಾತ್ಮಕ ಗೆಜೆಟ್ ಅಧಿಸೂಚನೆಯನ್ನು ರದ್ದು ಪಡಿಸುವಂತೆ ಈ ಅರ್ಜಿ ಒತ್ತಾಯಿಸಿದೆ. ಅನಿಸ್ ಅಹ್ಮದ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಪೌರತ್ವ ಕಾಯ್ದೆ 1955ರ ಸೆಕ್ಷನ್ 16ರ ಸೋಗಿನಲ್ಲಿ ಒಕ್ಕೂಟ ಸರ್ಕಾರವು ತನ್ನ ಅಧಿಕಾರ ದುರುಪಯೋಗಪಡಿಸುವುದನ್ನು ತಡೆಯುವಂತೆ ಕೂಡಾ ಮನವಿ ಮಾಡಿದೆ.