Home ಟಾಪ್ ಸುದ್ದಿಗಳು ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರ ವಿರುದ್ಧದ ಕೇಸ್ ವಾಪಸ್ ಪ್ರಕ್ರಿಯೆ | ರಾಜ್ಯವನ್ನು ಅರಾಜಕತೆಗೆ ತಳ್ಳುವ ಕ್ರಮ :...

ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರ ವಿರುದ್ಧದ ಕೇಸ್ ವಾಪಸ್ ಪ್ರಕ್ರಿಯೆ | ರಾಜ್ಯವನ್ನು ಅರಾಜಕತೆಗೆ ತಳ್ಳುವ ಕ್ರಮ : ಪಾಪ್ಯುಲರ್ ಫ್ರಂಟ್

ಬೆಂಗಳೂರು: ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇದು ರಾಜ್ಯವನ್ನು ಅರಾಜಕತೆಗೆ ತಳ್ಳುವ ಕ್ರಮವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಬಗ್ಗೆ ಗೃಹ ಮಂತ್ರಿಯವರಿಗೆ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಬೊಮ್ಮಾಯಿಯವರೂ ಕೇಸ್ ವಾಪಸು ಪಡೆಯುವುದರ ಕುರಿತು ಸೂಚನೆ ನೀಡಿದ್ದಾರೆ. ಸಮಾಜದ ಒಳಿತಿಗಾಗಿ ಹೋರಾಟ ನಡೆಸಿದವರು ದೀರ್ಘ ಕಾಲ ಸಮಸ್ಯೆ ಅನುಭವಿಸಬಾರದು ಎಂಬ ಸದುದ್ದೇಶದಿಂದ ಅವರ ಕೇಸು ವಾಪಸು ಪಡೆಯುವ ಪದ್ಧತಿ ಜಾರಿಯಲ್ಲಿದೆ. ಆದರೆ ಬಿಜೆಪಿ ಸರಕಾರವು ಮಾತ್ರ ತನ್ನ ಸ್ವಹಿತಾಸಕ್ತಿಗಾಗಿ ತನ್ನ ನಾಯಕರು, ಕಾರ್ಯಕರ್ತರ ಮೇಲಿನ ಗಂಭೀರ ಪ್ರಕರಣಗಳನ್ನು ಹಿಂಪಡೆದುಕೊಳ್ಳಲು ಇದನ್ನು ನಿರಂತರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ಸರಕಾರವು ಬಿಜೆಪಿ ನಾಯಕರ ಮತ್ತು ಶಾಸಕರ ಗುರುತರವಾದ ಕ್ರಿಮಿನಲ್ ಕೃತ್ಯಗಳನ್ನು ಈ ಹಿಂದೆ ರದ್ದುಗೊಳಿಸಿತ್ತು. ಧಾರವಾಡದ ಬಿಜೆಪಿ ಶಾಸಕ ಅಮೃತ್ ದೇಸಾಯಿ ಬೆಂಬಲಿಗರು 2015ರಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿಗಳಿಗೆ ಕಲ್ಲು ತೂರಾಟ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ, 2017ರಲ್ಲಿ ತನ್ನ ಬೆಂಬಲಿಗರೊಂದಿಗೆ ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ಅನುಮತಿ ಇಲ್ಲದೇ ರಾಲಿ ನಡೆಸಿ ಬ್ಯಾರಿಕೇಡ್ ಮೇಲೆ ಕಾರನ್ನು ವೇಗವಾಗಿ ನುಗ್ಗಿಸಿದ ಆರೋಪದಡಿ ಸಂಸದ ಪ್ರತಾಪ ಸಿಂಹ ವಿರುದ್ಧ ದಾಖಲಾಗಿದ್ದ ಪ್ರಕರಣ, ಗೋರಕ್ಷಣೆಯ ಹೆಸರಿನಲ್ಲಿ ಗೂಂಡಾಗಿರಿ ತೋರಿದ ನಕಲಿ ಗೋರಕ್ಷಕ ವಿರುದ್ಧದ ಕೇಸುಗಳನ್ನೂ ವಾಪಸ್ ಪಡೆಯಲಾಗಿದೆ. ಶಾಂತಿ ಭಂಗ, ಗಲಭೆ, ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಸಿ.ಟಿ.ರವಿ, ಈಶ್ವರಪ್ಪ, ಜಗದೀಶ್ ಕಾರಂತ, ಕುಂಬಳೆ ಸುಂದರ ರಾವ್ ಸಹಿತ ಸಾವಿರಾರು ಮಂದಿ ಕಾರ್ಯಕರ್ತರ ಮೇಲಿನ ಗಂಭೀರ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಈ ಮೂಲಕ ಬಿಜೆಪಿ ಸರಕಾರವು ಕ್ರಿಮಿನಲ್ ಹಾಗೂ ಕೋಮುಗಲಭೆಗೆ ಕಿಡಿಹಚ್ಚುವ ಸಂಘಪರಿವಾರದ ಕಿಡಿಗೇಡಿಗಳನ್ನು ರಕ್ಷಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾನೂನು ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸರಕಾರಿ ವ್ಯಾಜ್ಯಗಳ ಇಲಾಖೆಯ ಅಭಿಪ್ರಾಯವನ್ನು ಕಡೆಗಣಿಸಿ ಈ ಹಿಂದೆ ರಾಜ್ಯ ಸರಕಾರವು ಹಿಂದುತ್ವ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಮೇಲಿನ ಗಂಭೀರ ಸ್ವರೂಪದ ಪ್ರಕರಣಗಳನ್ನು ರದ್ದುಪಡಿಸಿತ್ತು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗೋಹತ್ಯೆ ಹೆಸರಿನಲ್ಲಿ ದುಷ್ಕರ್ಮ ಎಸಗಿದ, ಗಲಭೆ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಿದ ಗೂಂಡಾಗಳಿಗೆ ಬಿಜೆಪಿ ಸರಕಾರವು ಹೋರಾಟಗಾರರೆಂದು ಬಿಂಬಿಸುವ ಮೂಲಕ ಕೇಸುಗಳನ್ನು ವಾಪಸ್ ಪಡೆಯುತ್ತಿರುವುದು ಅಪಾಯಕಾರಿಯಾಗಿದೆ. ಈ ಪ್ರಕ್ರಿಯೆಯು ಕ್ರಿಮಿನಲ್ ಗೂಂಡಾಗಳಿಗೆ ದುಷ್ಕೃತ್ಯ ಎಸಗಲು ಉತ್ತೇಜನ ನೀಡಲಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಲಿದೆ. ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಮಿತಿ ಮೀರಿ ಹೋಗಲಿವೆ. ಈ ನಿಟ್ಟಿನಲ್ಲಿ ಕ್ರಿಮಿನಲ್ ಗೂಂಡಾಗಳಿಗೆ ರಕ್ಷಣೆ ನೀಡಿ ನ್ಯಾಯಾಂಗ ವ್ಯವಸ್ಥೆಯನ್ನು ಬುಡಮೇಲು ಮಾಡುವ ಈ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ಕೂಡಲೇ ಮಧ್ಯ ಪ್ರವೇಶ ಮಾಡಬೇಕೆಂದು ಯಾಸಿರ್ ಹಸನ್ ಒತ್ತಾಯಿಸಿದ್ದಾರೆ.

Join Whatsapp
Exit mobile version