Home ಟಾಪ್ ಸುದ್ದಿಗಳು ಅಡ್ವೊಕೇಟ್ ಮಹ್ಮೂದ್ ಪ್ರಾಚಾ ವಿರುದ್ಧ ದೆಹಲಿ ಪೊಲೀಸರಿಂದ ಕಿರುಕುಳ : ಪಾಪ್ಯುಲರ್ ಫ್ರಂಟ್ ಖಂಡನೆ

ಅಡ್ವೊಕೇಟ್ ಮಹ್ಮೂದ್ ಪ್ರಾಚಾ ವಿರುದ್ಧ ದೆಹಲಿ ಪೊಲೀಸರಿಂದ ಕಿರುಕುಳ : ಪಾಪ್ಯುಲರ್ ಫ್ರಂಟ್ ಖಂಡನೆ

ನವದೆಹಲಿ : ಸುಪ್ರೀಂ ಕೋರ್ಟ್ ವಕೀಲ ಮಹ್ಮೂದ್ ಪ್ರಾಚಾರ ಕಚೇರಿಯ ಮೇಲೆ ದೆಹಲಿ ಪೊಲೀಸ್ ನ ವಿಶೇಷ ಘಟಕ ನಡೆಸಿರುವ ಶೋಧನೆಗಳನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶಾಕಿಫ್ ಖಂಡಿಸಿದ್ದಾರೆ. ಈ ಕುರಿತು ಅವರು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ.

ಸಂಘಪರಿವಾರ ಪ್ರಾಯೋಜಿತ ಈಶಾನ್ಯ ದೆಹಲಿ ಹಿಂಸೆಯ ಸಂತ್ರಸ್ತರನ್ನು ಪ್ರತಿನಿಧಿಸುತ್ತಿರುವ ಕಾರಣಕ್ಕಾಗಿ ಕಿರುಕುಳದ ಭಾಗವಾಗಿ ಸುಪ್ರೀಂ ಕೋರ್ಟ್ ವಕೀಲ ಮಹ್ಮೂದ್ ಪ್ರಾಚಾರ ಕಚೇರಿಯ ಮೇಲೆ ದೆಹಲಿ ಪೊಲೀಸ್ ನ ವಿಶೇಷ ಘಟಕ ದಾಳಿ ನಡೆಸಿದೆ.  ಅವರು ಯು.ಎ.ಪಿ.ಎ.ಯಂತಹ ಕರಾಳ ಭಯೋತ್ಪಾದನಾ ಕಾನೂನಿನಡಿ ಕಂಬಿಯ ಹಿಂದೆ ತಳ್ಳಲ್ಪಟ್ಟ ಅಮಾಯಕರಿಗೆ ನ್ಯಾಯವನ್ನು ಖಾತರಿಪಡಿಸುವುದಕ್ಕಾಗಿ ಕೆಲಸ ಮಾಡುತ್ತಿರುವ ಮಾನವ ಹಕ್ಕು ಪರ ವಕೀಲರಾಗಿದ್ದಾರೆ. ಅಲ್ಲದೆ ಈಶಾನ್ಯ ದೆಹಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಹತ್ಯಾಕಾಂಡದಲ್ಲಿ ಸಂಘಪರಿವಾರ ಮತ್ತು ದೆಹಲಿ ಪೊಲೀಸರ ಪಾತ್ರವನ್ನು ಬಯಲಿಗೆಳೆದ ಕೆಲವೇ ಧೈರ್ಯವಂತ ವಕೀಲರುಗಳಲ್ಲಿ ಒಬ್ಬರಾಗಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹತ್ಯಾಕಾಂಡವನ್ನು ಸಂಘಟಿಸಿದ ಅದೇ ಶಕ್ತಿಗಳು ಈಗ ಸಂತ್ರಸ್ತರಿಗೆ ನ್ಯಾಯವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಅಡ್ವೊಕೇಟ್ ಪ್ರಾಚಾ ವಿರುದ್ಧದ ಸುಳ್ಳು ಕೇಸುಗಳು ಮತ್ತು ಕಿರುಕುಳದ ಘಟನೆಯು ಸಾಬೀತುಪಡಿಸುತ್ತದೆ. ಅವರ ಹಾರ್ಡ್ ಡಿಸ್ಕ್ ಮುಟ್ಟುಗೋಲು ಹಾಕಲು ಪ್ರಯತ್ನಿಸಿದ ಅಧಿಕಾರಿಗಳು ಕಕ್ಷಿದಾರ-ವಕೀಲರ ಹಕ್ಕನ್ನು ನಾಶಗೊಳಿಸಲು ಪ್ರಯತ್ನಿಸಿದ್ದಾರೆ. ಇದು ಇಡೀ ಕಾನೂನು ವೃತ್ತಿಗೆ ಮತ್ತು ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಅನಿಷ್ಟವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಕಿರುಕುಳವನ್ನು ಖಂಡಿಸುತ್ತದೆ ಮತ್ತು ಮಹ್ಮೂದ್ ಪ್ರಾಚಾರಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತದೆ. ಪಾಪ್ಯುಲರ್ ಫ್ರಂಟ್ ಯಾವತ್ತೂ ಸಂಘಪರಿವಾರದಿಂದ ಕಿರುಕುಳಕ್ಕೊಳಗಾಗುವ ಹೋರಾಟಗಾರರು ಮತ್ತು ವಕೀಲರ ಜೊತೆ ನಿಂತಿದೆ. ಕಾನೂನು ಬಳಗವು ಈ ಕಿರುಕುಳವನ್ನು ಖಂಡಿಸಬೇಕೆಂದು ನಾವು ಕರೆ ನೀಡುತ್ತೇವೆ ಎಂದು ಮುಹಮ್ಮದ್ ಶಾಕಿಪ್ ಹೇಳಿದ್ದಾರೆ.

Join Whatsapp
Exit mobile version