ನವದೆಹಲಿ : ಹಿಂದಿನ ಸರಕಾರಗಳಲ್ಲಿ ಬೆಲೆ ಏರಿಕೆ ವಿರುದ್ಧ ಹರಿಹಾಯುತಿದ್ದ ಬಿಜೆಪಿಗರ ಆಡಳಿತದಲ್ಲಿ ಇಂದು ಪೆಟ್ರೋಲ್ ಬೆಲೆ ಕೆಲವೆಡೆ 92 ರೂ. ಏರಿಕೆಯಾಗಿದ್ದರೂ, ಪ್ರತಿಪಕ್ಷಗಳಾಗಲೀ, ಮಾಧ್ಯಮಗಳಾಗಲೀ ಮಾತನಾಡುವವರೇ ಇಲ್ಲ. ಹೌದು, ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 90 ರೂ. ಗಡಿ ದಾಟಿದೆ. ಕೆಲವು ನಗರಗಳಲ್ಲಿ ರೂ. 91, ರೂ. 92ರ ಗಡಿಯೂ ದಾಟಿದೆ.
ಪ್ರಮುಖ ನಗರಗಳಲ್ಲಿ ಒಂದಾದ ಮುಂಬೈ ಕೂಡ ಲೀಟರ್ ಗೆ ರೂ. 90ರ ಗಡಿ ಸಮೀಪಿಸುತ್ತಿದೆ. ಸತತ 10 ದಿನಗಳ ಬೆಲೆ ಏರಿಕೆಯಿಂದಾಗಿ, ದಿನಕ್ಕೆ ಪೈಸೆಗಳ ಲೆಕ್ಕದಲ್ಲಿ ದೊಡ್ಡ ಮೊತ್ತದ ಏರಿಕೆ ಸದ್ದಿಲ್ಲದೆ ಮಾಡಲಾಗಿದೆ.
ಮಧ್ಯಪ್ರದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 90 ರೂ. ದಾಟಿದೆ. ಬಿಜೆಪಿ ಆಡಳಿತದ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 90.05 ಆಗಿದ್ದು, ಡೀಸೆಲ್ ಬೆಲೆ 80.10 ರೂ. ಆಗಿದೆ.
ಅಲ್ಲದೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಪೆಟ್ರೋಲ್ ಗೆ ಪ್ರತಿ ಲೀಟರ್ ಗೆ 90.16 ರೂ., ಅಗರ್ ನಲ್ಲಿ 90.86 ರೂ., ಅಲಿರಾಜ್ ಪುರದಲ್ಲಿ 91.40 ರೂ., ಅನುಪುರದಲ್ಲಿ 92.97 ರೂ., ಬದ್ವಾನಿಯಲ್ಲಿ 91.03 ರೂ. ರೇವಾದಲ್ಲಿ 92.71 ರೂ., ಸಾತ್ನಾದಲ್ಲಿ 92.13 ರೂ., ಶಾಹ್ದೊಲ್ ನಲ್ಲಿ 92.30 ರೂ.ನಷ್ಟಾಗಿದೆ. ಮಧ್ಯಪ್ರದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ ರೂ. 90ರ ಗಡಿ ದಾಟಿದೆ.
ಮಹಾರಾಷ್ಟ್ರದ ಹಲವು ನಗರಗಳಲ್ಲೂ ರೂ. 90ರ ಗಡಿ ದಾಟಿದೆ. ಔರಂಗಾಬಾದ್ ನಲ್ಲಿ ಲೀಟರ್ ಗೆ 90.25 ರೂ. ಹೆಚ್ಚಿಸಲಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಗೆ ಲೀಟರ್ ಗೆ 82.34 ರೂ. ಏರಿಕೆಯಾಗಿದೆ. ಡೀಸೆಲ್ ಬೆಲೆ 72.42 ರೂ. ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ ಗೆ ಲೀಟರ್ ಗೆ 89.02 ರೂ. ಆಗಿದ್ದು, ಡೀಸೆಲ್ ಗೆ 78.97 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಗೆ ಲೀಟರ್ ಗೆ 85.09 ರೂ. ಮತ್ತು ಡೀಸೆಲ್ ಬೆಲೆ ಲೀಟರ್ ಗೆ 78.97 ರೂ. ಆಗಿದೆ.