ನವದೆಹಲಿ: ಉಪಚುನಾವಣೆಯಲ್ಲಿ ಹೊಡೆತ ಬಿದ್ದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 5 ರೂ. ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ 10 ರೂಪಾಯಿ ಇಳಿಕೆ ಮಾಡಲಾಗಿದೆ.
ದೀಪಾವಳಿಯ ಕೊಡುಗೆ ರೂಪದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಘೋಷಿಸಿದೆ. ಇಳಿಕೆಯಾದ ದರವು ನಾಳೆಯಿಂದಲೇ ಅನ್ವಯವಾಗಲಿದೆ. ಪೈಸೆಗಳ ಲೆಕ್ಕದಲ್ಲಿ ಪ್ರತಿದಿನ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಹಲವು ಕಡೆ ಪೆಟ್ರೋಲ್ 120 ರೂ. ದಾಟಿದ್ದು, ಡೀಸೆಲ್ ದರ 110 ರೂ. ಗಡಿ ದಾಟಿದೆ. ಇಂಧನ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಸಾಗಾಣಿಕೆ ವೆಚ್ಚ ಜಾಸ್ತಿಯಾಗಿ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಇದೀಗ ಉಪ ಚುನಾವಣೆಯಲ್ಲಿ ಹಲವು ಕಡೆ ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ಸೋಲಿಸಿದ ಬೆನ್ನಲ್ಲೇ ತೈಲ ದರವೂ ಅಲ್ಪ ಇಳಿಕೆ ಕಂಡಿದೆ.