Home ಟಾಪ್ ಸುದ್ದಿಗಳು ಪೆಟ್ರೋಲ್‌, ಡೀಸೆಲ್‌ ದರ ಏರಿಕೆ; ಅಬಕಾರಿ ಸುಂಕ ಇಳಿಸಲು ಕೇಂದ್ರ ಹಿಂದೇಟು

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ; ಅಬಕಾರಿ ಸುಂಕ ಇಳಿಸಲು ಕೇಂದ್ರ ಹಿಂದೇಟು

ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಪೆಟ್ರೋಲಿಯಂ ಸಚಿವಾಲಯದ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿದೆ ಎಂಬುದಾಗಿ ವರದಿಗಳು ತಿಳಿಸಿವೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಗಗನಕ್ಕೇರಿದ್ದರೂ, ತೆರಿಗೆ ಕಡಿತಗೊಳಿಸಿ ದರ ಇಳಿಸಲು ಸರ್ಕಾರ ಒಲವು ತೋರುತ್ತಿಲ್ಲ. ಇದಕ್ಕೆ ಬದಲಾಗಿ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳೇ ಸಾಧ್ಯವಾದಷ್ಟು ಹೊರೆ ಹೊರಬೇಕು ಎಂದು ಸರಕಾರ ಬಯಸುತ್ತಿದೆ ಎಂದು ತಿಳಿದು ಬಂದಿದೆ.

ಪೆಟ್ರೋಲ್‌ ಬೆಲೆ ಮಾರ್ಚ್ 22 ರಿಂದ ಎಪ್ರಿಲ್ . 6ರ ಮಧ್ಯೆ ಪ್ರತಿ ಲೀಟರ್‌ಗೆ ಸುಮಾರು 10 ರೂ. ಏರಿಕೆಯಾದ ನಂತರ ಇದೀಗ ಮತ್ತೆ ಸ್ಥಗಿತಗೊಂಡಿದೆ. ಆದರೆ ಸದ್ಯದ ದೇಶೀಯ ಮತ್ತು ಅಂತರರಾಷ್ಟ್ರೀಯ ತೈಲ ಬೆಲೆಗಳಿಗೆ ಹೋಲಿಸಿದರೆ ಪೆಟ್ರೋಲ್‌ ದರದಲ್ಲಿ 8 ರೂ. ಹಾಗೂ ಡೀಸೆಲ್‌ ದರದಲ್ಲಿ18 ರೂ. ಅಂತರವಿದೆ ಎಂದು ಉದ್ಯಮದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ತೈಲ ಬೆಲೆಗಳ ಏರಿಕೆ ಪರಿಣಾಮ ಬಿಡುಗಡೆಯಾದ ಮಾಹಿತಿಯ ಪ್ರಕಾರ ಮಾರ್ಚ್‌ ಹಣದುಬ್ಬರ 17 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು ಶೇ. 6.95ರಷ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಇದೀಗ ಬೆಲೆ ಏರಿಕೆಯ ನಡುವೆ ಆ ತೆರಿಗೆಯನ್ನು ಇಳಿಕೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೆಚ್ಚುತ್ತಿದೆ. ಕೇಂದ್ರೀಯ ಅಬಕಾರಿ ಸುಂಕ ಮತ್ತು ರಾಜ್ಯಗಳು ವಿಧಿಸುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಬಹು ದೊಡ್ಡ ಪಾಲನ್ನು ಹೊಂದಿದೆ.

ತೈಲ ಬೆಲೆಗಳು 2014ರ ಮಧ್ಯ ಭಾಗದಿಂದ ಇಳಿಕೆಯಾಗಲು ಪ್ರಾರಂಭಿಸಿದ್ದವು. ಈ ಬೆಲೆ ಕುಸಿತದ ವೇಳೆ ಅಬಕಾರಿ ಸುಂಕವನ್ನು ಏರಿಸಿ ಕೇಂದ್ರ ಸರಕಾರ ಹೆಚ್ಚಿನ ಲಾಭ ಮಾಡಿಕೊಂಡಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಬೆಲೆಯೂ ಏರಿಕೆಯಾಗುತ್ತಿದ್ದು, ಇದರ ಜತೆಗೆ ಅಬಕಾರಿ ಸುಂಕವೂ ಸೇರಿಕೊಂಡು ಗ್ರಾಹಕರಿಗೆ ಹೊರೆಯಾಗಲಾರಂಭಿಸಿದೆ. ಈ ಸಂದರ್ಭದಲ್ಲಿ ತೆರಿಗೆ ಇಳಿಸಬೇಕಿದ್ದ ಸರಕಾರ, ಸದ್ಯಕ್ಕೆ ಮೌನವಾಗಿದೆ.

ಕಳೆದ ಎಂಟು ವರ್ಷಗಳಲ್ಲಿ ಪೆಟ್ರೋಲ್‌ ಡೀಸೆಲ್‌ ಮೇಲಿನ ಅಬಕಾರಿ ಸುಂಕ ತೀವ್ರವಾಗಿ ಏರಿಕೆ ಕಂಡಿದೆ. 2014 ಎಪ್ರಿಲ್ ನಲ್ಲಿ ಪೆಟ್ರೋಲ್ ಮೇಲೆ 9.48 ರೂ. ಇದ್ದ ಅಬಕಾರಿ ಸುಂಕ ಈಗ 27.9 ರೂ.ಗೆ ಬಂದು ತಲುಪಿದೆ. ಡೀಸೆಲ್ ಮೇಲಿನ ಸುಂಕ ಲೀಟರ್‌ಗೆ 3.18 ರೂ.ನಿಂದ 21.8 ರೂ.ಗೆ ಏರಿಕೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಕೇಂದ್ರ ಸರಕಾರ 2019-20ರಲ್ಲಿ 1.78 ಲಕ್ಷ ಕೋಟಿ ರೂ. ಅಬಕಾರಿ ಸುಂಕ ಸಂಗ್ರಹಿಸಿದ್ದರೆ, ಅದೇ 2020-21ರಲ್ಲಿ ಬರೋಬ್ಬರಿ 3.72 ಲಕ್ಷ ಕೋಟಿ ರೂ. ಸಂಗ್ರಹಿಸಿದೆ.

Join Whatsapp
Exit mobile version