Home ಕರಾವಳಿ ಪೆಟ್ರೋಲ್, ಡೀಸೆಲ್ ಪೂರೈಕೆ ಸ್ಥಗಿತ: ಮಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ

ಪೆಟ್ರೋಲ್, ಡೀಸೆಲ್ ಪೂರೈಕೆ ಸ್ಥಗಿತ: ಮಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ

ಮಂಗಳೂರು: ನಯಾರಾ ಪೆಟ್ರೋಲಿಯಂ ಕಂಪನಿಯವರು ರಾಜ್ಯದಲ್ಲಿ ತಮ್ಮ ಅಧೀನದ ಪೆಟ್ರೋಲ್ ಬಂಕ್ ಗಳಿಗೆ ಕಳೆದ 15 ದಿನಗಳಿಂದ ಪೆಟ್ರೋಲ್ ಡೀಸೆಲ್ ಪೂರೈಕೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ನೂರಾರು ಖಾಸಗಿ ಪೆಟ್ರೋಲ್ ಬಂಕ್ ಮಾಲೀಕರು ಮಂಗಳೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಎಲ್ಲಾ ಡೀಲರ್ ಗಳೂ ಮುಂಗಡ ಹಣ ಪಾವತಿಸಿ ಇಂಧನಕ್ಕೆ ಆರ್ಡರ್ ಹಾಕಿದ್ದರೂ ಪೂರೈಕೆ ಮಾಡಲಾಗುತ್ತಿಲ್ಲ, ಆದರೆ ಮಂಗಳೂರಿನ ತಣ್ಣೀರುಬಾವಿಯಲ್ಲಿರುವ ನಯಾರಾ ಕಂಪನಿಯ ಸಹವರ್ತಿ ಸಂಸ್ಥೆ ಏಜಿಸ್ ನವರ ಇಂಧನ ಸಂಗ್ರಹಣಾಗಾರದಲ್ಲಿ ಲಕ್ಷಾಂತರ ಲೀಟರ್ ಪೆಟ್ರೋಲ್ ಡೀಸೆಲ್ ಸಂಗ್ರಹಿಸಿ ಇರಿಸಲಾಗಿದೆ. ಅದನ್ನು ವಿತರಣೆ ಮಾಡಲಾಗುತ್ತಿಲ್ಲ ಎನ್ನುವುದು ಬಂಕ್ ಮಾಲೀಕರ ಆರೋಪ.

ಅಲ್ಲದೆ ಪೆಟ್ರೋಲ್ ಬಂಕ್ ಮಾಲೀಕರೇ ಸ್ವಯಂ ಆಗಿ ತಮಗೆ ಬೇಕಾದ ಇಂಧನ ಪೂರೈಕೆ ಮಾಡಿಕೊಳ್ಳಲು ಹಣ ಹಾಕಿ ಟ್ಯಾಂಕರ್ ಇರಿಸಿಕೊಂಡಿದ್ದಾರೆ, ಅಥವಾ ಟ್ರಾನ್ಸ್ ಪೋರ್ಟ್ ಕಂಪನಿಯವರ ಮೊರೆಹೋಗಿದ್ದಾರೆ. ಅಂತಹ ಲಾರಿ ಚಾಲಕರು ಕಳೆದ ಕೆಲವು ದಿನಗಳಿಂದ ಏಜಿಸ್ ಬಳಿಯಲ್ಲೇ ರಸ್ತೆಯಲ್ಲೇ ಕಾಯುತ್ತಿದ್ದಾರೆ. ಆದರೆ ಇಂಧನ ಸಿಗುತ್ತಿಲ್ಲ ಎಂದು ಡೀಲರ್ ಗಳಲ್ಲೊಬ್ಬರಾದ ಝಾಹಿರ್ ಮಾಣಿಪ್ಪಾಡಿ ಪ್ರತಿಭಟನೆ ವೇಳೆ ತಿಳಿಸಿದರು.

15 ದಿನಗಳಿಂದ ನಮ್ಮ ಪಂಪ್ ಗಳಿಗೆ ಕಂಪನಿಗಳಿಂದ ಸರಬರಾಜು ನಿಲ್ಲಿಸಲಾಗಿದೆ, ಯಾವುದೇ ಮುನ್ಸೂಚನೆ ನೀಡಿಲ್ಲ, ಎಲ್ಲಾ ಡೀಲರ್ ಗಳೂ ಹಣ ಹಾಕಿದ್ದರೂ ಇಂಧನ ಕೊಟ್ಟಿಲ್ಲ. ಇದರಿಂದ ನಾವು ಮಾಲೀಕರಿಗೆ, ನೂರಾರು ಕೆಲಸಗಾರರಿಗೆ ತೊಂದರೆಯಾಗಿದೆ, ಸಾರ್ವಜನಿಕರಿಗೆ ಬೇಕಾದಾಗ ಇಂಧನ ಕೊಡಲಾಗದೆ ಅವರ ಹಿಡಿಶಾಪ ಕೇಳುವಂತಾಗಿದೆ ಎಂದು ಇನ್ನೋರ್ವ ಡೀಲರ್ ಪ್ರವೀಣ್ ತಿಳಿಸಿದರು.

https://prasthutha.com/wp-content/uploads/2022/03/WhatsApp-Video-2022-03-31-at-2.37.49-PM.mp4

ಪೆಟ್ರೋಲ್ ಬಂಕ್ ಮಾಡಿ ಅಂತ ಹೇಳಿ 30 ವರ್ಷ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ, ಇನ್ನೂ ಒಂದು ವರ್ಷವೂ ಆಗಿಲ್ಲ, ಈಗಲೇ ಈ ರೀತಿ ಕೈಕೊಟ್ಟರೆ ಇನ್ನು 29 ವರ್ಷ ಇವರ ಜೊತೆ ವ್ಯಾಪಾರ ಮಾಡುವುದು ಹೇಗೆ? ಕನಿಷ್ಠ ರಾಜ್ಯದಲ್ಲಿ 500 ರಷ್ಟು ಬಂಕ್ ಗಳು ನಯಾರಾದವರನ್ನು ನಂಬಿಕೊಂಡಿದ್ದಾರೆ, ನಮ್ಮನ್ನು ಬಿಸಿನೆಸ್ ಪಾರ್ಟನರ್ ತರ ನೋಡದೆ ಗುಲಾಮರ ರೀತಿ ನೋಡುತ್ತಿದ್ದಾರೆ, ಯಾವುದೇ ಕಾರಣ ಕೊಡದೆ ಇಂಧನ ಪೂರೈಕೆ ನಿಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ, ಅಕ್ರಮವಾಗಿ ಇಂಧನ ದಾಸ್ತಾನು ಇಟ್ಟಿರುವ ಕಂಪನಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಚಿತ್ರದುರ್ಗದ ಡೀಲರ್ ಕೊಟ್ರೇಶ್ ಒತ್ತಾಯಿಸಿದರು.

ನೂರಾರು ವಿತರಕರು, ಟ್ಯಾಂಕರ್ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Join Whatsapp
Exit mobile version