Home ಟಾಪ್ ಸುದ್ದಿಗಳು ಜ್ಞಾನವಾಪಿ ಬಳಿಕ ಮಥುರಾದ ಮತ್ತೊಂದು ಮಸೀದಿ ತೆರವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

ಜ್ಞಾನವಾಪಿ ಬಳಿಕ ಮಥುರಾದ ಮತ್ತೊಂದು ಮಸೀದಿ ತೆರವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

ಮಥುರಾ: ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಅಲಹಾಬಾದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲೇ, ಇದೀಗ ಮೊಘಲರ ಕಾಲದಲ್ಲಿ ನಿರ್ಮಾಣವಾದ ಮಥುರಾದ ಮೀನಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಕೋಶಾಧಿಕಾರಿ ದಿನೇಶ್ ಶರ್ಮಾ ಎಂಬವರು ಮಥುರಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣದ ಪೂರ್ವ ಭಾಗದಲ್ಲಿರುವ ಠಾಕೂರು ಕೇಶವ್ ದೇವ್ ಜಿ ದೇವಸ್ಥಾನದ ಒಂದು ಭಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಮಥುರಾದ ಹಿರಿಯ ಸಿವಿಲ್ ವಿಭಾಗದ ನ್ಯಾಯಾಧೀಶರಾದ ಜ್ಯೋತಿ ಸಿಂಗ್ ಅವರ ಪೀಠಕ್ಕೆ ಧಾವೆ ಸಲ್ಲಿಸಲಾಗಿದೆ.

ಮಥುರಾದ ಮತ್ತೊಂದು ಮಸೀದಿಯಾದ ಶಾಹಿ ಮಸೀದಿ ಈದ್ಗಾವನ್ನು ಸ್ಥಳಾಂತರಿಸುವಂತೆ ಕೋರಿ ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಶರ್ಮಾ ಅವರು ಈ ಹಿಂದೆ ಶ್ರೀ ಕೃಷ್ಣ ಜನ್ಮಭೂಮಿ ಪಕ್ಕದಲ್ಲಿರುವ ಶಾಹಿ ಮಸೀದಿ ಈದ್ಗಾವನ್ನು ತೆಗೆಯುವಂತೆ ಕೋರಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ನಿಗದಿಪಡಿಸಿದೆ ಎಂದು ಅರ್ಜಿದಾರರ ಪರ ವಕೀಲ ದೀಪಕ್ ಶರ್ಮಾ ತಿಳಿಸಿದ್ದಾರೆ.
ಮೊಘಲ್ ಚಕ್ರವರ್ತಿ ಔರಂಗಜೇಬ್ ದೇವಾಲಯವನ್ನು ಧ್ವಂಸಗೊಳಿಸಿದ ಅದೇ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಶಾಹಿ ಮಸೀದಿ ಈದ್ಗಾದ ಆಡಳಿತ ಸಮಿತಿಯು ಈ ಅರ್ಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, 1968 ರಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.

Join Whatsapp
Exit mobile version