ನವದೆಹಲಿ: ಪ್ರವಾದಿ ನಿಂದನೆಗೈದ ಬಿಜೆಪಿಯ ಉಚ್ಚಾಟಿತ ನಾಯಕಿ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಅಹಿತಕರ ಘಟನೆಗಳಿಗೂ ನೂಪುರ್ ಶರ್ಮಾ ಹೊಣೆಯಾಗಿದ್ದು, ಆಕೆ ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಕ್ಕೆ ತಮ್ಮ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ದಾಳಿ ನಡೆಯುತ್ತಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಭಾನುವಾರ ಆರೋಪಿಸಿದ್ದಾರೆ.
ದೇಶದ ವಿವಿಧೆಡೆ ದಾಖಲಾಗಿರುವ ಹಲವು ಎಫ್ ಐಆರ್ ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ನೂಪುರ್ ಶರ್ಮಾ ಸಲ್ಲಿಸಲಾದ ಅರ್ಜಿಯನ್ನು ನಾನು ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿದ್ದ ಪೀಠವು ಕಳೆದ ವಾರ ವಜಾಗೊಳಿಸಿತ್ತು. ಈ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ದೂಷಣೆಯ ದಾಳಿಯನ್ನು ಎದುರಿಸುತ್ತಿದ್ದೇವೆ. ಸೂಕ್ಷ್ಮ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಭಾನುವಾರ ನಡೆದ ಸುಪ್ರೀಂಕೋರ್ಟ್ ನ ಎರಡನೇ ನ್ಯಾಯಮೂರ್ತಿ ಎಚ್ .ಆರ್ ಖನ್ನಾ ಸ್ಮಾರಕ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಅನವಶ್ಯಕವಾಗಿ ಮಾಧ್ಯಮಗಳು ಮಧ್ಯಪ್ರವೇಶಿಸಿವೆ. ಮಾಧ್ಯಮ ವಿಚಾರಣೆಯನ್ನು ನಿಯಂತ್ರಿಸಲು ಸಂಸತ್ತು ಕಾನೂನುಗಳನ್ನು ಜಾರಿಗೆ ತರಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ತೀರ್ಪುಗಳನ್ನು ಟೀಕಿಸುವ ಬದಲು, ನ್ಯಾಯಾಧೀಶರ ವಿರುದ್ಧ ವೈಯಕ್ತಿಕ ದಾಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ತಾವು ನೀಡುತ್ತಿರುವ ತೀರ್ಪುಗಳಿಗಾಗಿ ನ್ಯಾಯಾಧೀಶರ ಮೇಲೆ ನಡೆಯುತ್ತಿರುವ ವೈಯಕ್ತಿಕ ದಾಳಿಗಳು ಅಪಾಯಕಾರಿ ಬೆಳವಣಿಗೆ ಎಂದು ಪರ್ದಿವಾಲಾ ಹೇಳಿದರು.
ತೀರ್ಪುಗಳು ಯಾವುದೇ ಕಾರಣಕ್ಕೂ ಸಾರ್ವಜನಿಕರ ಅಭಿಪ್ರಾಯದ ಪ್ರಭಾವಕ್ಕೆ ಒಳಗಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯ ನೀಡುವ ತೀರ್ಪಿನಂತೆಯೇ ನಾವು ಬದುಕುತ್ತೇವೆ. ಹಾಗೆಂದ ಮಾತ್ರಕ್ಕೆ ಕೋರ್ಟ್ ನೀಡುವ ತೀರ್ಪುಗಳೆಲ್ಲವೂ ಸರಿ ಎಂದರ್ಥವಲ್ಲ. ಆದಾಗ್ಯೂ ಅವುಗಳನ್ನು ಒಪ್ಪಿಕೊಂಡು ಬದುಕುತ್ತಿದ್ದೇವೆ ಎಂದು ಅವರು ಹೇಳಿದರು.