Home ಕರಾವಳಿ ಮುದ್ರಣ ಜಾಹೀರಾತಿಗೆ ಅನುಮತಿ ಕಡ್ಡಾಯ: ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.

ಮುದ್ರಣ ಜಾಹೀರಾತಿಗೆ ಅನುಮತಿ ಕಡ್ಡಾಯ: ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ-10 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯ ಸಮಯದ ಪೂರ್ವ 48 ಗಂಟೆ ಅವಧಿಯಲ್ಲಿ ಅಂದರೆ (ಮೇ-9 ಮತ್ತು ಮೇ-10 ರಂದು) ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಘ-ಸಂಸ್ಥೆ, ವ್ಯಕ್ತಿಗತವಾಗಿ ಮುದ್ರಣ ಮಾಧ್ಯಮದಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ಪ್ರಕಟಿಸಬೇಕಾದಲ್ಲಿ ಸಂಬಂಧಿಸಿದ ಜಿಲ್ಲಾ ಅಥವಾ ರಾಜ್ಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಪೂರ್ವಾನುಮತಿ ಪಡೆಯವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

ಜಿಲ್ಲೆಯ ಚುನಾವಣಾ ಕಣದಲ್ಲಿರುವ ಅಭ್ಯøರ್ಥಿಗಳು ತಮ್ಮ ಚುನಾವಣಾ ಜಾಹೀರಾತನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಗೆ ನಿಗಧಿತ ಅನುಬಂಧ-ಸಿ ಅರ್ಜಿ ನಮೂನೆಯೊಂದಿಗೆ ಎರಡು ಸ್ವಯಂ ದೃಢೀಕೃತ ಜಾಹೀರಾತು ಪ್ರತಿಗಳನ್ನು ಸಲ್ಲಿಸಿ ಪೂರ್ವಾನುಮತಿ ಪಡೆದು ಜಾಹೀರಾತು ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ.

ಇನ್ನು ಚುನಾವಣಾ ಬಹಿರಂಗ ಪ್ರಚಾರ ಮೇ-8 ರಂದು ಸಂಜೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಎಂದಿನಂತೆ ಜಿಲ್ಲಾ ಎಂ.ಸಿ.ಎಂ.ಸಿ. ಸಮಿತಿಯಿಂದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗೆ ಮೇ-8 ರ ಸಂಜೆ 5 ಗಂಟೆ ವರೆಗಿನ ಅವಧಿಗೆ ಮಾತ್ರ ಸುದ್ದಿ ವಾಹಿನಿ, ಕೇಬಲ್ ಟಿ.ವಿ., ರೇಡಿಯೋ, ಸಾಮಾಜಿಕ ಜಾಲತಾಣ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣಾ ಜಾಹೀರಾತು ಪ್ರಚಾರ ಪಡಿಸಲು ಸಮಿತಿಯಿಂದ ಪೂರ್ವಾನುಮತಿ ನೀಡಲಾಗುತ್ತದೆ.

ಪೂರ್ವಾನುಮತಿ ಇಲ್ಲದೆ ಜಾಹೀರಾತು ಪ್ರಕಟಿಸುವಂತಿಲ್ಲ:

ಇನ್ನು ಪತ್ರಿಕೆಗಳು ಮೇ 9 ಮತ್ತು 10 ರಂದು ಯಾವುದೇ ಚುನಾವಣಾ ಜಾಹಿರಾತುಗಳನ್ನು ಪ್ರಕಟಿಸುವ ಮುನ್ನ ಎಂ.ಸಿ.ಎಂ.ಸಿ ಸಮಿತಿಯಿಂದ ಪೂರ್ವಾನುಮತಿ ಪಡೆಯಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಜಾಹೀರಾತು ಪ್ರಕಟಿಸಬೇಕು. ಅನುಮತಿ ಇಲ್ಲದೆ ಹೋದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ.
ಮತದಾನದ ಪೂರ್ವ 72 ಗಂಟೆ ಅವಧಿಯಲ್ಲಿ ಬಿತ್ತರಿಸುವ ಸುದ್ದಿ, ಪ್ರಸಾರಗಳ ಮೇಲೆ ಚುನಾವಣಾ ಆಯೋಗ ತೀವ್ರ ನಿಗಾ ವಹಿಸಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version