Home ಟಾಪ್ ಸುದ್ದಿಗಳು ಪಿರಿಯಾಪಟ್ಟಣ ಚರ್ಚ್’ನಲ್ಲಿ ಕಳ್ಳತನ: ಆರೋಪಿಯ ಬಂಧನ

ಪಿರಿಯಾಪಟ್ಟಣ ಚರ್ಚ್’ನಲ್ಲಿ ಕಳ್ಳತನ: ಆರೋಪಿಯ ಬಂಧನ

ಮೈಸೂರು: ಪಿರಿಯಾಪಟ್ಟಣದ ಸೇಂಟ್ ಮೇರಿಸ್ ಚರ್ಚ್ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್ನ ಮಾಜಿ ಕಾರ್ಮಿಕನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ.


ಮೈಸೂರು ಗ್ರಾಮಾಂತರ ಎಸ್ ಪಿ ಸೀಮಾ ಲಾಟ್ಕರ್ ಮಾತನಾಡಿ, ‘ಕಳ್ಳತನ ನಡೆದ ಸ್ಥಳದಲ್ಲಿ ಬ್ಲೂ ಕಲರ್ ಹ್ಯಾಂಡ್ ಗ್ಲೌಸ್ ಸಿಕ್ಕಿತ್ತು. ಇದರ ಆಧಾರದಲ್ಲಿ ಚರ್ಚ್ನಲ್ಲಿಯೇ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಿಶ್ವ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.


ಸಂಬಳ ನೀಡದ್ದಕ್ಕೆ ಕೃತ್ಯ: ‘ಪಿರಿಯಾಪಟ್ಟಣದ ಮಹದೇಶ್ವರ ಬಡಾವಣೆಯ ನಿವಾಸಿ ವಿಶ್ವ ಚರ್ಚ್ನಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಎರಡು ತಿಂಗಳಿನಿಂದ ಸಂಬಳ ನೀಡಿರಲಿಲ್ಲ. ಈ ಬಗ್ಗೆ ಕ್ರಿಸ್ಮಸ್ ಸಂದರ್ಭದಲ್ಲಿ ಫಾದರ್ ಜೊತೆ ಚರ್ಚಿಸಲು ಬಂದಿದ್ದಾಗ ಅವರು ಭೇಟಿ ಮಾಡಲು ಅವಕಾಶ ಕೊಟ್ಟಿರಲಿಲ್ಲ.
ಇದರಿಂದ ಸಿಟ್ಟಿಗೆದ್ದು ಫಾದರ್ ಇಲ್ಲದ ವೇಳೆ ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್ನ ಮೂರು ಹುಂಡಿ ಕಳ್ಳತನ ಮಾಡಿದ್ದಾನೆ. ಹುಂಡಿಗಳಿಂದ ಎರಡು ಸಾವಿರ ರೂ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ’ ಎಂದು ಎಸ್ ಪಿ ವಿವರಿಸಿದರು.


ಧಾರ್ಮಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ: ‘ಚರ್ಚ್ನಲ್ಲಿ ಕಳ್ಳತನ ಮಾಡಲು ಬಂದ ವಿಶ್ವ ಮೂರು ಹುಂಡಿಗಳನ್ನು ಕಳ್ಳತನ ಮಾಡಿದ್ದ. ನಂತರ ಟೇಬಲ್ ಮೇಲೆ ಬಾಲ ಯೇಸುವಿನ ಮೂರ್ತಿ ಇಡಲಾಗಿತ್ತು. ಈ ಮೂರ್ತಿಯ ಕೆಳಗೆ ಹಣ ಇದೆ ಎಂದು ಭಾವಿಸಿ ಟೇಬಲ್’ನ ಬಟ್ಟೆ ಎಳೆದಿದ್ದಾನೆ. ಆ ಸಂದರ್ಭದಲ್ಲಿ ಮೂರ್ತಿ ಕೆಳಗೆ ಬಿದ್ದು ಒಡೆದು ಹೋಗಿತ್ತು. ವಿಶ್ವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.


‘ಸೇಂಟ್ ಮೇರಿಸ್ ಚರ್ಚ್ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಹೀಗಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಲಾಗಿದೆ’ ಎಂದು ಎಸ್ ಪಿ ಹೇಳಿದರು.

Join Whatsapp
Exit mobile version