Home ಕರಾವಳಿ ನೆಹರೂರವರಿಗೆ ಅಪಮಾನಮಾಡುವುದನ್ನು ಜಿಲ್ಲೆಯ ಜನತೆ ಸಹಿಸುವುದಿಲ್ಲ : ರಮಾನಾಥ ರೈ

ನೆಹರೂರವರಿಗೆ ಅಪಮಾನಮಾಡುವುದನ್ನು ಜಿಲ್ಲೆಯ ಜನತೆ ಸಹಿಸುವುದಿಲ್ಲ : ರಮಾನಾಥ ರೈ

ಮಂಗಳೂರು: ಜಿಲ್ಲೆಗೆ ಮಾಜಿ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಕೊಡುಗೆ ಅಪಾರ. ಅವರಿಗೆ ಅವಮಾನ ಮಾಡುವುದನ್ನು ಜಿಲ್ಲೆಯ ಜನತೆ ಸಹಿಸುವುದಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ,ಅಭಿವೃದ್ಧಿಗಾಗಿ ಶ್ರಮಿಸಿದ ನೆಹರೂರವರನ್ನು ಅವಮಾನಿಸುವುದು ಸರಿಯಲ್ಲ. ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಹಾಕದೆ ಅವಮಾನಿಸಲಾಗಿದೆ.ಇದು ದೇಶ ಭಕ್ತರಿಗೆ ನೋವು ತರುವ ವಿಚಾರ ಆದ್ದರಿಂದ ಇದನ್ನು ಖಂಡಿಸುವ ಅಗತ್ಯವಿದೆ ಎಂದು ಹೇಳಿದರು.

ಸರ್ಕಾರ ಸ್ವಾತಂತ್ರ್ಯ ಹೋರಾಟಗಾರನ್ನು ಅವಮಾನಿಸಿ, ಗಾಂಧೀಜಿಯವರನ್ನು ಹತ್ಯೆ ಮಾಡಿದವರನ್ನು ವೈಭವೀಕರಿಸುತ್ತಿದ್ದಾರೆ. ಗಾಂಧೀಜಿ ಹಂತಕನನ್ನು ವೈಭವೀಕರಿಸುವುದು ಸರಿಯಲ್ಲ. ನಾಲ್ಕನೇ ಅಂಗವಾದ ಮಾಧ್ಯಮಗಳು ಇವನ್ನೆಲ್ಲ ಗಮನಿಸಿ ಬರೆಯಬೇಕು ಎಂದು ಹೇಳಿದರು.

ಇತಿಹಾಸವನ್ನು ತಿಳಿದುಕೊಂಡು ಮಾತನಾಡಬೇಕು. ದೇಶದಲ್ಲಿ ಹೊಸ ಇತಿಹಾಸಕಾರರು ಸೃಷ್ಟಿಯಾಗುತ್ತಿದ್ದಾರೆ. ಅದು ಬೇರೆ ವಿಷಯ. ಸ್ವಾತಂತ್ರೃ ಹೋರಾಟದಲ್ಲಿ ಯಾರೆಲ್ಲ ಭಾಗವಹಿಸಿದ್ದರು ಎಂಬುದು  ಆಗಿನ ಇತಿಹಾಸಕಾರರು, ಪ್ರಮುಖ ಬರಹಗಾರರು ಬರೆದ ಪುಸ್ತಕಗಳಲ್ಲಿ ದೊರೆಯುತ್ತದೆ. ಇತಿಹಾಸವನ್ನ ಓದಿ, ಅದರೆ ಸೂಲಿಬೆಲೆ ಬರೆದ ಪುಸ್ತಕ ಓದಬೇಡಿ ಎಂದು  ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನೇ  ಎಂಬ  ಸುದ್ದಿಗಾರರ ಪ್ರಶ್ನೆಗೆ ಮಾಜಿ ಸಚಿವ ರಮಾನಾಥ್ ರೈ ಉತ್ತರಿಸಿದರು.

ನೆಹರು ಕಾಲದ್ದನ್ನು ಬಿಜೆಪಿ ಒಂದೊಂದಾಗಿ ಮಾರಾಟ ಮಾಡುತ್ತಿದೆ. ಜವಾಹರಲಾಲ್ ನೆಹರು ಉದ್ಘಾಟನೆ ಮಾಡಿದ್ದ  ವಿಮಾನ ನಿಲ್ದಾಣವನ್ನು ಅದಾನಿಗೆ ಕೊಟ್ಟರು. ಅವರ ಹೆಸರಿನಲ್ಲಿರುವ  ಮೈದಾನವನ್ನು ಕೆಲವರು ಹೆಸರು ಮರೆಸಿ ಕರೆಯುತ್ತಿದ್ದಾರೆ. ಸರೋಜಿನಿ ನಾಯ್ಡು, ಖಾನ್ ಅಬ್ದುಲ್ ಗಫಾರ್ ಖಾನ್, ಕಾರ್ನಾಡ್ ಸದಾಶಿವರಾವ್, ಪಟೇಲ್ ಇತ್ಯಾದಿ ಸ್ವಾತಂತ್ರ್ಯ ಹೋರಾಟಗಾರರ ತಂಡವೇ ಇದೆ. ಅವರನ್ನು ಅವಮಾನಿಸುವುದು ಖಂಡನೀಯ ಎಂದು ಹೇಳಿದರು.

ನವ ಮಂಗಳೂರು ಬಂದರು, ವಿಮಾನ ನಿಲ್ದಾಣ, ಹೆದ್ದಾರಿಗಳು, ಎಂಜಿನಿಯರಿಂಗ್ ಕಾಲೇಜು ಮೊದಲಾದವಕ್ಕೆ ನೆಹರು ಕಾರಣ. ಅಂದಿನ ಸಂಸದರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಮಲ್ಯ ಅವರು ನೆಹರು ನೆರವಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾರಣರಾದರು ಎಂದು ರೈ ನೆನಪಿಸಿಕೊಂಡರು.

ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಶಾಲೆಟ್ ಪಿಂಟೋ, ಪ್ರಕಾಶ್ ಸಾಲಿಯಾನ್, ಟಿ.ಕೆ.ಸುಧೀರ್, ಬೇಬಿ ಕುಂದರ್ ಮುಂತಾದವರು ಉಪಸ್ಥಿತರಿದ್ದರು.

Join Whatsapp
Exit mobile version