ಮಡಿಕೇರಿ: ಕೊಡಗಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಾವೇಶಗಳು ಮುಂದೂಡಿದ್ದರೂ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಮದ್ಯ ಮಾರಾಟವನ್ನು ಕೂಡ ನಿಷೇಧಿಸಲಾಗಿದೆ. ಮಡಿಕೇರಿ ನಗರದಲ್ಲಿ ಮೀಸಲು ಪೊಲೀಸ್ ಪಡೆ ಪಥ ಸಂಚಲನ ನಡೆಸಿ ಯಾವುದೇ ಆತಂಕ ಬೇಡ ಎಂದು ಅಭಯ ನೀಡಿದರು. ಜಿಲ್ಲೆಯಾದ್ಯಂತ ನೂರಾರು ಪೊಲೀಸರ ಕಣ್ಗಾವಲಿದ್ದು, ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ನಿಷೇಧಾಜ್ಞೆ ಹಿನ್ನೆಲೆ ಮಡಿಕೇರಿಯ ವಾರದ ಶುಕ್ರವಾರದ ಸಂತೆ ನಡೆಯುವುದಿಲ್ಲ.
ಕೊಡಗಿನಲ್ಲಿ ಒಟ್ಟು 16 ಚೆಕ್ ಪೋಸ್ಟ್ ಗಳು ಸೇರಿದಂತೆ ಒಟ್ಟು 20 ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಕಿಡಿಗೇಡಿಗಳಿಂದ ಯಾವುದೇ ಅಹಿತಕರ ಘಟನೆ ಅವಕಾಶ ಮಾಡುವುದಿಲ್ಲ. ಈಗಾಗಲೇ ಸಾವಿರಕ್ಕೂ ಹೆಚ್ಚು ಪೊಲೀಸ್ ಫೋರ್ಸ್ ಬಳಸಲಾಗಿದೆ.
ಒಂದು ವೇಳೆ ಅಹಿತಕರ ಘಟನೆ ಏನಾದರೂ ನಡೆಯುವ ಸುಳಿವು ಸಿಕ್ಕರೆ ಇನ್ನಷ್ಟು ಪೊಲೀಸ್ ಫೋರ್ಸ್ ತರಲು ಸಿದ್ಧವಿದೆ. ಪೊಲೀಸ್ ಇಲಾಖೆ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧವಿದೆ. ಕೊಡಗಿನ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.