ಸಮಾವೇಶಗಳಲ್ಲಿ ಹಾಜರಾಗದ ಜನತೆ: ಚಿಂತೆಯಲ್ಲಿ ಬಿಜೆಪಿ

ಬೆಂಗಳೂರು: ಬಿಜೆಪಿ ಸಮಾವೇಶ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನರ ಹಾಜರಾತಿ ಕಡಿಮೆಯಾಗಿರುವುದು ಪಕ್ಷವು ಚಿಂತೆಗೊಳಗಾಗುವಂತೆ ಮಾಡಿದೆ.

ವಿಧಾನಸಭಾ ಚುಣಾವಣೆಗಾಗಿ ಬಿಜೆಪಿ ಹಲವಾರು ತಂತ್ರಗಳನ್ನು ಬಳಸಿ ಜನರನ್ನು ತಮ್ಮತ್ತ ಸೆಳೆಯಲು ನೋಡುತ್ತಿದ್ದರೂ ಅದರಲ್ಲಿ ವಿಫಲವಾದಂತಿದೆ. ಇತ್ತೀಚೆಗೆ ಬಿಜೆಪಿಯ ಸಮಾವೇಶಗಳಲ್ಲಿ ಖಾಲಿ ಕುರ್ಚಿಗಳ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪಕ್ಷವು ಮುಜುಗರಕ್ಕೊಳಗಾಗಿದೆ.

- Advertisement -

ಬಳ್ಳಾರಿಯಲ್ಲಿ ನಡೆದ ಪಕ್ಷದ ಎಸ್‌ಸಿ/ಎಸ್‌ಟಿ ಸಮಾವೇಶದಲ್ಲಿ ಜನಸಂದಣಿ ನಿರೀಕ್ಷೆಗಿಂತ ತುಂಬಾ  ಕಡಿಮೆ ಇತ್ತು.

ಅಲ್ಲದೆ, ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಧಾನಿ ಮೋದಿ ಭಾಷಣ ಮಾಡಿದ ಸಾರ್ವಜನಿಕ ಕಾರ್ಯಕ್ರಮದಲ್ಲೂ ಜನರ ಸಂಖ್ಯೆ ಕಡಿಮೆಯಿತ್ತು. ಅದರಲ್ಲಿ ಕೇವಲ 50,000ದಷ್ಟು ಜನರು ಮಾತ್ರ ಸೇರಿದ್ದರು.

ಇನ್ನು ಉಡುಪಿಯ ಕಾಪುವಿನಲ್ಲಿ ಬಿಜೆಪಿಯ ಭಾರೀ ಪ್ರಚಾರದ ಜನಸಂಕಲ್ಪ ಯಾತ್ರೆಗೂ ಜನರಿಂದ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ನಡುವೆ ಸಮಾವೇಶಗಳಿಗೆ ಹೆಚ್ಚಿನ ಜನರನ್ನು ಕರೆತರಲು ಬಸ್ ಗಳನ್ನು ಕಳುಹಿಸಲಾಗಿತ್ತಾದರೂ, ಜನರು ಇಲ್ಲದ ಕಾರಣ ಅವುಗಳಲ್ಲಿ ಅನೇಕ ಬಸ್ ಗಳು ಖಾಲಿಯಾಗಿ ವಾಪಸ್ಸಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಸಮಾವೇಶಗಳಲ್ಲಿನ ವೀಡಿಯೊಗಳು ಮತ್ತು ಫೋಟೋಗಳಲ್ಲಿ ಖಾಲಿ ಕುರ್ಚಿಗಳು ಕಂಡು ಬಂದಿವೆ.  ಅಸಮರ್ಪಕ ಆಡಳಿತ ಇಲ್ಲದಿರುವುದು ಹಾಗೂ ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದು ರಾಜಕೀಯ ವಿಶ್ಲೇಷಕ ಬಿ. ಎಸ್. ಮೂರ್ತಿ ಹೇಳಿದ್ದಾರೆ.