Home ಟಾಪ್ ಸುದ್ದಿಗಳು ಪೆಗಾಸಸ್ ಕಣ್ಗಾವಲು: ಸರಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ರಾಹುಲ್ ನೇತೃತ್ವದಲ್ಲಿ 14 ಪಕ್ಷಗಳ ಕಾರ್ಯತಂತ್ರ

ಪೆಗಾಸಸ್ ಕಣ್ಗಾವಲು: ಸರಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ರಾಹುಲ್ ನೇತೃತ್ವದಲ್ಲಿ 14 ಪಕ್ಷಗಳ ಕಾರ್ಯತಂತ್ರ

ನವದೆಹಲಿ, ಜು.28: ಭಾರೀ ಪ್ರತಿಭಟನೆಗಳಿಗೆ ಗುರಿಯಾಗಿರುವ ಹಾಗೂ ಮತ್ತೆ ಮತ್ತೆ ಸಂಸತ್ತು ಮುಂದೂಡಿಕೆಗೆ ಕಾರಣವಾದ ಪೆಗಾಸಸ್ ಗೂಢಚಾರಿಕೆ ಸಂಬಂಧವಾಗಿ ಹದಿನಾಲ್ಕು ಪ್ರತಿಪಕ್ಷಗಳು ಕಾಂಗ್ರೆಸ್ ನ ರಾಹುಲ್ ಗಾಂಧಿ ನಾಯಕತ್ವದಲ್ಲಿ ಸಭೆ ಸೇರಿ ಮುಂದೆ ಯಾವ ರೀತಿ ಒಕ್ಕೂಟ ಸರಕಾರವನ್ನು ಇದಕ್ಕೆ ಜವಾಬ್ದಾರರಾಗಿಸುವಲ್ಲಿ ಕಾರ್ಯತಂತ್ರ ರೂಪಿಸಬೇಕು ಎಂದು ಚರ್ಚಿಸಿವೆ.
ಪೆಗಾಸಸ್ ಗೂಢಚಾರಿಕೆಗೆ ಈಡಾದ ಸಂಸದ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ನಡೆದ ಈ ಸಭೆಯಲ್ಲಿ ಶಿವಸೇನಾ, ಸಿಪಿಐ, ಸಿಪಿಎಂ, ರಾಷ್ಟ್ರೀಯ ಜನತಾ ದಳ, ಆಮ್ ಆದ್ಮಿ ಪಾರ್ಟಿ, ಡಿಎಂಕೆ ನಾಯಕರು ಭಾಗವಹಿಸಿದ್ದರು. ಎನ್ ಸಿಪಿ ಮತ್ತು ಮುಸ್ಲಿಂ ಲೀಗ್ ಸದಸ್ಯರು ಸಹ ಹಾಜರಿದ್ದರು. ಅಲ್ಲದೆ ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಕೇರಳ ಕಾಂಗ್ರೆಸ್, ವಿಡುದಲೈ ಚಿರುತೈಗಳ್ ಕಟ್ಚಿ, ಸಮಾಜವಾದಿ ಸೇರಿದಂತೆ 14 ಪಕ್ಷಗಳ ಮುಖಂಡರು ಸೇರಿದ್ದರು. ಅನಂತರ ಇವರೆಲ್ಲರೂ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.


ಕಾಂಗ್ರೆಸ್ ಪಕ್ಷವು ಸಂಸತ್ ಕಲಾಪ ನಡೆಸಲು ಬಿಡುತ್ತಿಲ್ಲ ಎಂದು ಪ್ರಧಾನಿ ಮೋದಿ ಆಪಾದಿಸಿದ ಬೆನ್ನಿಗೆ ಈ ಒಗ್ಗಟ್ಟು ಆಳುವ ಪಕ್ಷಕ್ಕೆ ಕಸಿವಿಸಿ ಉಂಟು ಮಾಡಿದೆ. ಮಂಗಳವಾರ ಲೋಕ ಸಭೆಯ ಕಲಾಪ ಒಂಬತ್ತು ಬಾರಿ ಮುಂದೂಡಲ್ಪಟ್ಟಿತು. ಪ್ರಧಾನಿಯವರು ಕಲಾಪ ನಡೆಸಲಾಗದ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ್ದರು. ಅಲ್ಲದೆ ಮಂಗಳವಾರ ಒಂಬತ್ತು ರಾಜಕೀಯ ಪ್ರತಿ ಪಕ್ಷಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪೆಗಾಸಸ್ ಕುತಂತ್ರಾಂಶದ ಬಗೆಗೆ ಕ್ರಮ ಜರುಗಿಸಲು ಮುಂದಾಗಬೇಕು ಎಂದು ಪತ್ರ ಬರೆದಿವೆ.


ಬುಧವಾರ 14 ಪ್ರತಿಪಕ್ಷಗಳು ಸೇರಿ ಪೆಗಾಸಸ್ ಹೊಣೆಯನ್ನು ಸರಕಾರದ ಮೇಲೆ ಹೊರಿಸಲು ಸಭೆ ಸೇರಿ ಚರ್ಚಿಸಿ ಪತ್ರಿಕಾಗೋಷ್ಠಿ ನಡೆಸಿವೆ. ನಿನ್ನೆ ರಾಷ್ಟ್ರಪತಿಯವರಿಗೆ ಬರೆದ ಪತ್ರಕ್ಕೆ ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ, ನ್ಯಾಶನಲ್ ಕಾನ್ಫರೆನ್ಸ್, ಸಿಪಿಐ, ಸಿಪಿಎಂ, ಎನ್ ಸಿಪಿ ಪಕ್ಷಗಳು ಸಹಿ ಹಾಕಿದ್ದವು. “ದೇಶದ ಮೇಲೆ ಕರಿ ನೆರಳು ಹಾಸಿರುವ ಎರಡು ಕೆಟ್ಟ ಘಟನೆಗಳಾದ ಮೂರು ಕೃಷಿ ಕಾಯ್ದೆಗಳು ಮತ್ತು ಇಸ್ರೇಲ್ ನ ಪೆಗಾಸಸ್ ಮೂಲಕ ಪತ್ರಕರ್ತರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆದಿರುವ ಗೂಢಚಾರಿಕೆಯ ನಿಜ ಸ್ಥಿತಿ ಅರಿಯಲು ರಾಷ್ಟ್ರಪತಿಗಳಾದ ತಾವು ಕೂಡಲೆ ಮುಂದೆ ಬರಬೇಕು ಎಂದು ನಾವು ಬೇರೆ ಬೇರೆ ಪಕ್ಷಗಳ ಸಂಸದರು ಮನವಿ ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ಕೋರಲಾಗಿದೆ. ಈ ಪತ್ರ ಕಾಂಗ್ರೆಸ್ ಸಹಿ ಹೊಂದಿಲ್ಲ.


ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಎಲ್ಲ ಪ್ರತಿಪಕ್ಷಗಳು ಒಗ್ಗೂಡಿ ಪೆಗಾಸಸ್ ಬಗೆಗೆ ಚರ್ಚೆ ಮೊದಲು ನಡೆಯಬೇಕು ಎಂದು ಪಟ್ಟು ಹಿಡಿಯುವಲ್ಲಿ ಕಾಂಗ್ರೆಸ್ ಪ್ರಧಾನ ಪಾತ್ರ ವಹಿಸಿತ್ತು. ಇದರ ನಡುವೆ ಮಂಗಳವಾರ ದೆಹಲಿಗೆ ಬಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪೆಗಾಸಸ್ ವಿಷಯ ಪ್ರಧಾನಿಯವರ ಜೊತೆಗೆ ಮಾತನಾಡುವಾಗಲೂ ಎತ್ತಿರುವುದಾಗಿ ತಿಳಿದುಬಂದಿದೆ. ಬುಧವಾರ ಸೋನಿಯಾ ಗಾಂಧಿಯವರನ್ನು ಭೇಟಿಯಾದ ಅವರು ಪ್ರತಿಪಕ್ಷಗಳ ಒಗ್ಗಟ್ಟಿನ ಜೊತೆಗೆ ಪೆಗಾಸಸ್ ತೇಲಿ ಬಿಟ್ಟಿದ್ದಾರೆ. ಗುರುವಾರ ರಾಷ್ಟçಪತಿಗಳನ್ನು ಭೇಟಿಯಾಗಲಿರುವ ಮಮತಾ ಅವರು ಪ್ರಾಸಂಗಿಕವಾಗಿ ಪೆಗಾಸಸ್ ಪತ್ರದ ವಿಚಾರ ಎತ್ತಬಹುದು ಎನ್ನಲಾಗಿದೆ.


ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಮಮತಾರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರ ಮೇಲೂ ಪೆಗಾಸಸ್ ಬೇಹುಗಾರಿಕೆ ಇದ್ದುದರಿಂದ ಇದು ಆ ಪಕ್ಷಕ್ಕೂ ಪ್ರಮುಖ ವಿಷಯವಾಗಿದೆ. ಒಕ್ಕೂಟ ಸರಕಾರವು ಪೆಗಾಸಸ್ ತನಿಖೆಯ ಅಗತ್ಯವಿಲ್ಲ ಎಂದಿದೆ. ದೇಶದ ಕಾನೂನು ಕಕ್ಷೆಯೊಳಗೇ ಇರುವುದಾಗಿ ಅದರ ವಾದ. ಆದರೆ ಪಶ್ಚಿಮ ಬಂಗಾಳದಲ್ಲಿ ಪೆಗಾಸಸ್ ತನಿಖೆಗೆ ಮಮತಾ ಆದೇಶಿಸಿದ್ದಾರೆ.

Join Whatsapp
Exit mobile version