ಬೆಂಗಳೂರು: 2017ರಲ್ಲಿ ಇಸ್ರೇಲ್ ನೊಂದಿಗಿನ 2 ಬಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಖರೀದಿ ಭಾಗವಾಗಿ “ಮುಖ್ಯ ವಸ್ತುವಾಗಿ” ಪೆಗಾಸಸ್ ಅನ್ನು ಖರೀದಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ (NYT) ವರದಿ ಮಾಡಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ನಾಗರಿಕರ ಬೇಹುಗಾರಿಕೆ ನಡೆಸಲು ನೀಚ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡು, ಇದರ ನೈತಿಕ ಹೊಣೆ ಹೊತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.
ಪೆಗಾಸಸ್ ಸ್ಪೈವೇರ್ ಬಳಸಿಕೊಂಡು ಮೋದಿ ನೇತೃತ್ವದ ಬಿಜೆಪಿ ಸರಕಾರ ರಾಜಕಾರಣಿಗಳ, ಪತ್ರಕರ್ತರ ಬುದ್ಧಿಜೀವಿಗಳ ಹಾಗೂ ಹೋರಾಟಗಾರರ ಖಾಸಗೀತನದ ಬೇಹುಗಾರಿಕೆ ನಡೆಸುತ್ತಿದೆ ಎಂಬ ವ್ಯಾಪಕ ಆರೋಪ ಕೇಳಿಬಂದಿತ್ತು. ಪಾರ್ಲಿಮೆಂಟ್ ಒಳಗಡೆ ಈ ವಿಚಾರವಾಗಿ ಚರ್ಚೆಗೆ ತಯಾರಾಗದೆ ಯಾವುದೇ ಬೇಹುಗಾರಿಕೆ ನಡೆಸಿಲ್ಲ ಎಂಬುದಾಗಿ ಸರಕಾರ ಸಬೂಬು ನೀಡಿತ್ತು. ಇದರ ಖರೀದಿಯ ಮಾಹಿತಿಯನ್ನು ಕೇಳಿದ ಸಂದರ್ಭಗಳಲ್ಲಿ ಆಂತರಿಕ ಭದ್ರತೆಯ ಕಾರಣಗಳನ್ನು ಹೇಳಿ ಮಾಹಿತಿ ನೀಡಲು ನಿರಾಕರಣೆ ಮಾಡಲಾಗುತ್ತಿತ್ತು. ಸುಪ್ರೀಂಕೋರ್ಟ್ ಈ ವಿಚಾರವಾಗಿ ತನಿಖೆಯನ್ನು ನಡೆಸಲು ತಂಡವನ್ನು ರಚಿಸಿದ್ದು, ಸರ್ಕಾರ ಎಲ್ಲಾ ಸಂದರ್ಭಗಳಲ್ಲಿ ಆಂತರಿಕ ಭದ್ರತೆಯ ಕಾರಣಗಳನ್ನು ಹೇಳಿ ನುಣುಚಿಕೊಳ್ಳುವಂತಿಲ್ಲ ಎಂಬುದಾಗಿ ಚಾಟಿಯೇಟನ್ನು ಬೀಸಿತ್ತು.
ನಾಗರಿಕರ ಖಾಸಗಿ ಮಾಹಿತಿ ಅವರ ಮೂಲಭೂತ ಹಕ್ಕಾಗಿದ್ದು ಅವರ ಅನುಮತಿಯಿಲ್ಲದೆ ಅದನ್ನು ಪಡೆಯುವ ಅಧಿಕಾರ ಯಾರಿಗೂ ಇಲ್ಲ. ಪೆಗಾಸಸ್ ಸ್ಪೈವೇರ್ ಬಳಸಿಕೊಂಡು ಖಾಸಗೀತನದ ಬೇಹುಗಾರಿಕೆ ನಡೆಸಿರುವುದು ಸಂವಿಧಾನ ವಿರೋಧಿಯಾದ ಕೆಲಸವಾಗಿದೆ ಹಾಗೂ ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ನಿರಂತರ ಜಾರಿಗೆ ತರುತ್ತಿರುವ ಜನವಿರೋಧಿ, ಸಂವಿಧಾನ ವಿರೋಧಿ ಕಾನೂನುಗಳ, ನೀತಿಗಳ ವಿರುದ್ಧ ಹೋರಾಟ ನಡೆಸುವವರನ್ನು, ಪ್ರತಿಪಕ್ಷ ರಾಜಕಾರಣಿಗಳನ್ನು, ಪತ್ರಕರ್ತರನ್ನು ಹತ್ತಿಕ್ಕಲು ಅವರ ಖಾಸಗೀತನದ ಬೇಹುಗಾರಿಕೆ ನಡೆಸಲು ಪೆಗಾಸಸ್ ಸ್ಪೈವೇರ್ ಬಳಸಿ ನೀಚ ಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ನಾಚಿಕೆಗೇಡು. ಆದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ನೀಡಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.