ಕಾಪು: ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಜೈಹಿಂದ್ ಜಂಕ್ಷನ್ ಬಳಿ ಕುಡಿತದ ಅಮಲಿನಲ್ಲಿದ್ದ ಸ್ಕೂಟರ್ ಸವಾರರು ಪಾದಚಾರಿಗಳಿಬ್ಬರ ಜತೆ ವಾಗ್ವಾದ ನಡೆಸಿ ಬಳಿಕ ಚೂರಿಯಿಂದ ಇರಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಉದ್ಯಾವರ ಗ್ರಾಮದ ಬೊಳ್ವೆ ಮಠದಕುದ್ರು ನಿವಾಸಿಗಳಾದ ಜಯರಾಮ ತಿಂಗಳಾಯ ಮತ್ತು ಸಂದೀಪ್ ಇರಿತಕ್ಕೊಳಗಾಗಿದ್ದು, ಆರೋಪಿಗಳಾದ ಕುರ್ಕಾಲು ಸುಭಾಸ್ ನಗರದ ನಿವಾಸಿಗಳಾದ ಪ್ರೇಮನಾಥ್, ಸಂಪತ್ ಚೂರಿಯಿಂದ ಇರಿದ ಆರೋಪಿಗಳು.
ಗೆಳೆಯರಾಗಿದ್ದ ಜಯರಾಮ ತಿಂಗಳಾಯ ಮತ್ತು ಸಂದೀಪ್ ಬುಧವಾರ ರಾತ್ರಿ ಬೊಳ್ವೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಉದ್ಯಾವರ ಜೈಹಿಂದ್ ಜಂಕ್ಷನ್ ಎದುರಿನ ರಾ.ಹೆ. 66ರ ಉಡುಪಿ-ಮಂಗಳೂರು ರಸ್ತೆಯ ಪೂರ್ವದ ಅಂಚಿನಲ್ಲಿರುವಾಗ ರಸ್ತೆಯ ಎದುರಿನಿಂದ ಹೆಡ್‌ಲೈಟ್ ಹಾಕದೆ ಸ್ಕೂಟರ್‌ವೊಂದರಲ್ಲಿ ಬಂದ ಆರೋಪಿಗಳು ರಸ್ತೆ ದಾಟಲು ನಿಂತಿದ್ದವರಿಗೆ ಢಿಕ್ಕಿ ಹೊಡೆಯುವ ರೀತಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದರು.
ಈ ವೇಳೆ ಜಯರಾಮ ತಿಂಗಳಾಯ ಅವರು ಹೆಡ್‌ಲೈಟ್ ಇಲ್ಲದೆ ಬಂದು ನಮ್ಮನ್ನು ಕೊಲ್ಲುತ್ತೀರಾ ಎಂದು ಸ್ಕೂಟರ್ ಸವಾರರನನ್ನು ಪ್ರಶ್ನಿಸಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಸ್ಕೂಟರ್‌ನ ಹಿಂಬದಿ ಸವಾರ ತನ್ನ ಕೈಯಲ್ಲಿದ್ದ ಹರಿತವಾದ ಚೂರಿಯಿಂದ ಜಯರಾಮ ಅವರ ಎಡಗೈ ಭುಜದ ಕೆಳಗೆ, ಬಲಭುಜದ ಬಳಿ ಹಾಗೂ ಹಣೆಗೆ ಚೂರಿಯಿಂದ ಚುಚ್ಚಿದ್ದಾನೆ. ಈ ವೇಳೆ ತಪ್ಪಿಸಲು ಹೋದ ಸಂದೀಪ್ ಅವರಿಗೂ ಚೂರಿಯಿಂದ ಬೆನ್ನಿಗೆ ಚುಚ್ಚಿದ್ದಾನೆ. ಗಲಾಟೆ ಕೇಳಿದ ಸಮೀಪದ ಗೂಡಂಗಡಿಯವರು ಬರುವುದನ್ನು ಕಂಡು ಇಬ್ಬರು ಕೂಡಾ ಸ್ಕೂಟರ್ ಸಮೇತ ಪರಾರಿಯಾಗಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ಸಾಯಿನಾಥ್ ಅವರು ಇರಿತಕ್ಕೊಳಗಾದವರನ್ನು ವಾಹನವೊಂದರಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನ್ಯಾಯಾಂಗ ಬಂಧನ
ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದು, ಬಂಧಿತರಿಗೆ ನ್ಯಾಯಾಲಯ ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.