ಮುಂಬೈ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿರುವುದಕ್ಕೆ ಶಿವಸೇನೆ ಸಂಸದ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ. ತಮ್ಮ ಭೇಟಿಯ ವೇಳೆ ಫಡ್ನವಿಸ್ ಗೆ ಶರದ್ ಪವಾರ್, ಉತ್ತಮ ವಿರೋಧ ಪಕ್ಷದ ಮುಖಂಡರಾಗುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿರಬಹುದು ಎಂದು ರಾವತ್ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಹೊಸ ರಾಜಕೀಯ ಲೆಕ್ಕಾಚಾರಗಳು ಸೃಷ್ಟಿಯಾಗುವ ಬಗ್ಗೆ ಅವರು ನಿರಾಕರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ ನಡೆಯುವುದಿಲ್ಲ. ಯಾಕೆ ಎಲ್ಲಾ ಭೇಟಿಗಳನ್ನು ರಾಜಕೀಯಗೊಳಿಸುವುದು? ಎಂದು ರಾವತ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿರುವ ಫಡ್ನವಿಸ್ ಸೋಮವಾರ ಪವಾರ್ ಅವರನ್ನು ಭೇಟಿಯಾದ ಬಳಿಕ, ಇದೊಂದು ಔಪಚಾರಿಕ ಭೇಟಿಯಾಗಿತ್ತು ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಬೆಂಬಲವಿದೆ.