ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ಮಾಡುವಾಗ ‘ಪವಿತ್ರಾ ಗೌಡ ಅವರು ದರ್ಶನ್ ಪತ್ನಿ’ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿಕೆ ನೀಡಿದ್ದರು. ಆ ಬಳಿಕ ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಕೂಡ ಅದೇ ರೀತಿ ಸುದ್ದಿ ಪ್ರಸಾರ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ಪತ್ರ ಬರೆದಿದ್ದಾರೆ.
ನೀವು ಸುದ್ದಿಗೋಷ್ಠಿ ಮಾಡುವಾಗ ದರ್ಶನ್ ಪತ್ನಿ ಪವಿತ್ರಾ ಗೌಡ ಎಂದು ತಪ್ಪಾಗಿ ಹೇಳಿದ್ದೀರಿ. ಆ ಬಳಿಕ ರಾಜ್ಯದ ಗೃಹಮಂತ್ರಿಗಳು, ರಾಷ್ಟ್ರಮಟ್ಟದ ಮಾಧ್ಯಮದರು ಕೂಡ ಅದನ್ನೇ ಹೇಳಿದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ದಂಪತಿ ಅರೆಸ್ಟ್ ಅಂತ ಸುದ್ದಿ ಮಾಡಿದರು. ಇದರಿಂದಾಗಿ ನಾನು ಮತ್ತು ನನ್ನ ಮಗ ವಿನೀಶ್ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವಂತೆ ಆಗಬಾರದು. ಪವಿತ್ರಾ ಗೌಡಗೆ ಸಂಜಯ್ ಸಿಂಗ್ ಜೊತೆ ಮದುವೆ ಆಗಿತ್ತು. ಅವರಿಂದ ಮಗಳನ್ನೂ ಪಡೆದಿದ್ದಾರೆ. ಪೊಲೀಸ್ ದಾಖಲೆಗಳಲ್ಲಿ ಈ ಮಾಹಿತಿ ಸ್ಪಷ್ಟವಾಗಿರಲಿ. ಇದರಿಂದ ನನಗೆ ಭವಿಷ್ಯದಲ್ಲಿ ತೊಂದರೆ ಆಗದಿರಲಿ’ ಎಂದು ಪತ್ರದಲ್ಲಿ ವಿಜಯಲಕ್ಷ್ಮಿ ಅವರು ಮನವಿ ಮಾಡಿಕೊಂಡಿದ್ದಾರೆ.
‘ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಕಾನೂನು ತನ್ನದೇ ಸಮಯ ತೆಗೆದುಕೊಳ್ಳುತ್ತದೆ ಅಂತ ನಾನು ನಂಬಿದ್ದೇನೆ. ಈ ಕೇಸ್ನ ಮಾಸ್ಟರ್ ಮೈಂಡ್ ಆಗಿರುವ ಪವಿತ್ರಾ ಗೌಡ ವಿಚಾರದಲ್ಲಿ ಮಾಹಿತಿ ಸೂಕ್ತವಾಗಿರಲಿ ಎಂದು ನಾನು ಒತ್ತಾಯಿಸುತ್ತೇನೆ. ಆಕೆ ನನ್ನ ಗಂಡನ ಸ್ನೇಹಿತೆ ಎಂಬುದು ನಿಜ. ಆದರೆ ಆಕೆ ನನ್ನ ಗಂಡನ ಪತ್ನಿ ಅಲ್ಲ ಎಂಬುದು ನಿಮಗೆ ದಯವಿಟ್ಟು ತಿಳಿದಿರಲಿ. ನಾನು ಮಾತ್ರ ದರ್ಶನ್ ಅವರನ್ನು ಕಾನೂನಾತ್ಮಕವಾಗಿ ಮದುವೆ ಆದವಳು. ಧರ್ಮಸ್ಥಳದಲ್ಲಿ 2003ರ ಮೇ 19ರಂದು ನಮ್ಮ ಮದುವೆ ನಡೆದಿತ್ತು’ ಎಂದು ವಿಜಯಲಕ್ಷ್ಮಿ ಅವರು ಈ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.