ಟ್ರಂಪ್ ನಿಕಟವರ್ತಿ, ಭಾರತೀಯ ಮೂಲದ ಕಾಶ್(ಕಶ್ಯಪ್) ಪಟೇಲ್ ಗೆ ಅಮೆರಿಕದ ಉನ್ನತ ಗುಪ್ತಚರ ಸಂಸ್ಥೆ ಸಿಐಎ(CIA)ನ ಮುಖ್ಯಸ್ಥರಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
78 ವರ್ಷದ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವ ಮೂಲಕ 2ನೇ ಬಾರಿ ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ್ದಾರೆ.
ನವೆಂಬರ್ 5ರ ಅಂತಿಮ ಹಂತದ ಚುನಾವಣೆಗೂ ಮುನ್ನವೇ ಡೊನಾಲ್ಡ್ ಟ್ರಂಪ್ ಅವರು ತಮ್ಮ ನೂತನ ಆಡಳಿತದ ಸಂಭಾವ್ಯ ಸಚಿವರು, ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸಿಐಎನ ನೂತನ ಮುಖ್ಯಸ್ಥರನ್ನಾಗಿ ಕಾಶ್ ಪಟೇಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇರುವ ಸುದ್ದಿಗಳು ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ.
ಕಾಶ್ ಪಟೇಲ್ ಡೊನಾಲ್ಡ್ ಟ್ರಂಪ್ ನಿಕಟವರ್ತಿ, ಪಟೇಲ್ ಗುಪ್ತಚರ ಮತ್ತು ರಕ್ಷಣಾ ವಿಭಾಗ ಎರಡರಲ್ಲೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪಟೇಲ್ 1986ರಲ್ಲಿ ನ್ಯೂಯಾರ್ಕ್ ನ ಗಾರ್ಡನ್ ಸಿಟಿಯಲ್ಲಿ ಜನಿಸಿದ್ದರು. ಭಾರತದ ಗುಜರಾತಿನ ವಲಸಿಗ ದಂಪತಿಯ ಪುತ್ರ ಕಾಶ್ ಪಟೇಲ್. ಪಟೇಲ್ ಪೋಷಕರು ಪೂರ್ವ ಆಫ್ರಿಕಾದಲ್ಲಿ ಬೆಳೆದಿದ್ದು, ಪಟೇಲ್ ತಂದೆ 1970ರಲ್ಲಿ ಈದಿ ಅಮೀನ್ ಆಡಳಿತ ನಡೆಸುತ್ತಿದ್ದ ವೇಳೆ ಉಗಾಂಡಕ್ಕೆ ಓಡಿ ಹೋಗಿದ್ದು, ನಂತರ ಪೋಷಕರು ಅಮೆರಿಕಕ್ಕೆ ವಲಸೆ ಹೋಗಿದ್ದರು.
ಪೇಸ್ ಯೂನಿರ್ವಸಿಟಿಯಲ್ಲಿ ಕಾನೂನು ಪದವಿ ಪಡೆದ ನಂತರ ಆರಂಭದಲ್ಲಿ ಪಟೇಲ್ ಉದ್ಯೋಗ ಗಿಟ್ಟಿಸಿಕೊಳ್ಳಲು ತುಂಬಾ ಶ್ರಮಪಟ್ಟಿದ್ದರು. ಬಳಿಕ ಸುಮಾರು 9 ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದು, ತದನಂತರ ಅಮೆರಿಕದ ಜಸ್ಟೀಸ್ ಡಿಪಾರ್ಟ್ ಮೆಂಟ್ ಗೆ ಆಯ್ಕೆಯಾಗಿದ್ದರು.
2017ರಲ್ಲಿ ಪಟೇಲ್ ಅವರು ಟ್ರಂಪ್ ಅವರ ನಿಕಟವರ್ತಿಯಾದ ರಿಪಬ್ಲಿಕನ್ ಕಾಂಗ್ರೆಸ್ ನ ಡೆವಿನ್ ನೂನ್ಸ್ ನೇತೃತ್ವದ ಗುಪ್ತಚರ ಇಲಾಖೆಯ ಖಾಯಂಮಾತಿ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು.
2016ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈವಾಡ ಇದ್ದಿರುವ ಆರೋಪ ಬಗ್ಗೆ ಸಮಿತಿಯ ತನಿಖೆಯ ನಂತರ ಪಟೇಲ್ ದೇಶದಲ್ಲಿ ಗಮನ ಸೆಳೆದಿದ್ದರು. ಟ್ರಂಪ್ ಪ್ರಚಾರದ ವೇಳೆ ಎಫ್ ಬಿಐ ಕಣ್ಗಾವಲು ಅಧಿಕಾರಿಯನ್ನು ದುರುಪಯೋಗಪಡಿಸಿಕೊಂಡಿ ಎಂದು ಆರೋಪಿಸಿ ವಿವಾದಾತ್ಮಕ ನ್ಯೂನ್ಸ್ ಮೆಮೊ ಕೊಡುವಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು.