ಪತಂಜಲಿ ಕೊರೋನಿಲ್ ಗೆ ನೇಪಾಳದಲ್ಲಿ ನಿಷೇಧ! : ಸ್ಪಷ್ಟನೆ ನೀಡಿದ ಆರೋಗ್ಯ ಸಚಿವಾಲಯ

Prasthutha|

ಕಠ್ಮಂಡು : ಯೋಗಗುರು ರಾಮ್‌ ದೇವ್‌ ಮಾಲಕತ್ವದ ಪತಂಜಲಿ ಸಂಸ್ಥೆಯ ಕೊರೋನಿಲ್‌ ಔಷಧವನ್ನು ನೇಪಾಳ ಸರಕಾರವು ನಿಷೇಧಿಸಿದೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಕುರಿತು ನೇಪಾಳ ಸರಕಾರ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ ಎಂದು ದೇಶದ ಆರೋಗ್ಯ ಸಚಿವಾಲಯದ ವಕ್ತಾರ ಡಾ ಕೃಷ್ಣ ಪ್ರಸಾದ್ ಪೌದ್ಯಾಲ್ ಸ್ಪಷ್ಟಪಡಿಸಿದ್ದಾರೆ. ನೇಪಾಳ ಸರಕಾರ ಕೊರೋನಿಲ್ ಔಷಧಿಯನ್ನು ನಿಷೇಧಿಸಿದೆ ಎಂಬ ಮಾಧ್ಯಮ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.

- Advertisement -

ನೇಪಾಳದಲ್ಲಿ ಸಾರ್ವಜನಿಕರಿಗೆ ವಿತರಿಸಲ್ಪಡುವ ಯಾವುದೆ ಔಷಧಿಯು ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಡ್ರಗ್ ಅಡ್ಮಿನಿಸ್ಟ್ರೇಶನ್ ಇಲಾಖೆಯಲ್ಲಿ ನೋಂದಾಯಿತವಾಗಬೇಕು ಎಂದು ಅವರು ಹೇಳಿದ್ದಾರೆ. “ನೇಪಾಳದ ಹಿಂದಿನ ಆರೋಗ್ಯ ಸಚಿವ ಹೃದಯೇಶ್ ತ್ರಿಪಾಠಿ ಅವರಿಗೆ ಕೆಲ ಸಮಯದ ಹಿಂದೆ ಒಂದು ಪ್ಯಾಕೆಟ್ ಕೊರೋನಿಲ್ ಉಡುಗೊರೆಯಾಗಿ ನೀಡಲಾಗಿತ್ತು. ಅದಕ್ಕಿಂತ ಹೆಚ್ಚಿನ ಮಾಹಿತಿ ಈ ಕುರಿತು ನನಗೆ ಇಲ್ಲ” ಎಂದು ಅವರು ಹೇಳಿದ್ದಾರೆ.

ಆದರೆ ಪತಂಜಲಿ ಸಂಸ್ಥೆಯ ರಾಮದೇವ್ ಅವರು ಉಡುಗೊರೆಯಾಗಿ ನೀಡಿದ್ದ ಕೊರೋನಿಲ್ ಕಿಟ್‍ಗಳ ವಿತರಣೆಯನ್ನು ನೇಪಾಳದ ಆರ್ಯುವೇದ ಮತ್ತು ಪರ್ಯಾಯ ಔಷಧಿಗಳ ಇಲಾಖೆ ಸೋಮವಾರ ನಿಲ್ಲಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಕೋವಿಡ್ ಚಿಕಿತ್ಸೆಗೆ ನೆರವಾಗುವುದೆಂದು ಪತಂಜಲಿ ಹೇಳಿಕೊಂಡಿರುವ ಈ ಕೊರೋನಿಲ್‍ನ 1,500 ಕಿಟ್‍ಗಳನ್ನು ಪಡೆಯುವಾಗ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಲಾಗಿಲ್ಲ ಎಂಬ ಕಾರಣವನ್ನು ಇಲಾಖೆ ನೀಡಿತ್ತು.
ಕೋವಿಡ್ ಚಿಕಿತ್ಸೆಗೆ ನೀಡಲಾಗುವ ಔಷಧಿಗಳಿಗೆ ಕೊರೋನಿಲ್ ಕಿಟ್‍ನಲ್ಲಿರುವ ಗುಳಿಗೆಗಳು ಹಾಗೂ ನೇಸಲ್ ಆಯಿಲ್ ಸರಿಸಮಾನವಲ್ಲ ಎಂದು ಸರಕಾರದ ಆದೇಶ ಹೇಳಿತ್ತು. ಕೊರೋನಿಲ್ ಎಷ್ಟು ಪರಿಣಾಮಕಾರಿ ಎಂಬ ಕುರಿತು ಇತ್ತೀಚೆಗೆ ಭಾರತದ ಐಎಂಎ ಕೂಡ ಪ್ರಶ್ನಿಸಿದ್ದನ್ನು ನೇಪಾಳಿ ಅಧಿಕಾರಿಗಳು ಉಲ್ಲೇಖಿಸಿದ್ದರು.

Join Whatsapp