ಹಾರಾಟ ವೇಳೆ ವಿಮಾನದ ಬಾಗಿಲು ತೆರೆದ ಪ್ರಯಾಣಿಕ; ತಪ್ಪಿದ ಭಾರೀ ದುರಂತ!

Prasthutha|

ದ.ಕೊರಿಯಾ: ಹಾರಾಟದ ವೇಳೆ ಪ್ರಯಾಣಿಕನೊಬ್ಬ ವಿಮಾನದ ಬಾಗಿಲು ತೆರೆದಿದ್ದು, ಭಾರೀ ದುರಂತವೊಂದು ತಪ್ಪಿದೆ ಎಂದು ಏಷಿಯಾನಾ ಏರ್‌ಲೈನ್ಸ್ ವಕ್ತಾರರೊಬ್ಬರು ಬಹಿರಂಗಪಡಿಸಿದ್ದಾರೆ.

 ಜೆಜು ದ್ವೀಪದಿಂದ ಟೇಕ್ ಆಫ್ ಆದ ವಿಮಾನವು ಇಂದು(ಶುಕ್ರವಾರ) ಮಧ್ಯಾಹ್ನ 3:40 ರ ಸುಮಾರಿಗೆ ದಕ್ಷಿಣ ಕೊರಿಯಾದ ಡೇಗು ವಿಮಾನ ನಿಲ್ದಾಣದ ಕಡೆ ಬರುತ್ತಿತ್ತು. ಏಷಿಯಾನಾ ಏರ್‌ಲೈನ್ಸ್ ಡೇಗು ವಿಮಾನ ನಿಲ್ದಾಣಕ್ಕೆ ತಲುಪಲು ಇನ್ನೇನು ಕೆಲವೇ ಕ್ಷಣಗಳು ಬಾಕಿ ಇತ್ತು. ಪ್ರಯಾಣಿಕನೊಬ್ಬ ವಿಮಾನದ ಬಾಗಿಲು ತೆರೆದು ಭೀತಿ ಹುಟ್ಟಿಸಿದ್ದಾನೆ. ನಂತರ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ.

- Advertisement -

ಹಾರಾಟದ ವೇಳೆ ವಿಮಾನದ ಬಾಗಿಲು ತೆರೆದಿದ್ದರಿಂದ ವಿಮಾನದೊಳಗೆ ಜೋರಾಗಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಕೆಲ ಪ್ರಯಾಣಿಕರಿಗೆ ಉಸಿರಾಟದ ತೊಂದರೆಯುಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿಮಾನದ ತುರ್ತು ಬಾಗಿಲಿನ ಬಳಿ ಕುಳಿತಿದ್ದ 30 ವರ್ಷ ವಯಸ್ಸಿನ ಪ್ರಯಾಣಿಕನೊಬ್ಬ ಬಾಗಿಲನ್ನು ಉದ್ದೇಶಪೂರ್ವಕವಾಗಿ ತೆರೆದಿದ್ದಾನೆ. ವಿಮಾನದ ಒಳಗಿನಿಂದ ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ ಭಯಾನಕ ವಿಡಿಯೋ ವ್ಯಾಪಕ ವೈರಲಾಗಿದೆ.

 ವಿಮಾನಯಾನ ಕಾನೂನು ಉಲ್ಲಂಘನೆಗಾಗಿ ಪೊಲೀಸರು ಇದೀಗ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಮಾನದಲ್ಲಿ 149 ಪ್ರಯಾಣಿಕರಿದ್ದರು. ಈ ಪೈಕಿ 9 ಜನರನ್ನು ಹಠಾತ್ ಅಪಾಯವನ್ನು ಕಂಡು ಆಘಾತ ಮತ್ತು ಉಸಿರಾಟದ ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -