ಬೆಂಗಳೂರು: ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು CBI ವರದಿ ನೀಡಿದೆ. ನಮ್ಮ ಸರ್ಕಾರವಿದ್ದಾಗ ಸಂಭವಿಸಿದ್ದ ಮೇಸ್ತಾ ಸಾವಿಗೆ BJP ನಾಯಕರು ಹಿಂದುತ್ವದ ಬಣ್ಣ ಕಟ್ಟಿ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ, ಗಲಭೆ ಸೃಷ್ಟಿಸಿದ್ದರು. ಅಂದಿನ ಗಲಭೆಯಲ್ಲಿ IGP ಕಾರಿಗೆ ಕಲ್ಲು ತೂರಿ ಲಾಠಿ ಚಾರ್ಜ್ ಕೂಡ ನಡೆದಿತ್ತು. ಅಂದಿನ ದೊಂಬಿ ಮತ್ತು ಗಲಾಟೆಗೆ ಯಾರು ಹೊಣೆ? ಎಂದು ಕಾಂಗ್ರೆಸ್ ಶಾಸಕ, ಎಐಸಿಸಿ ಸದಸ್ಯ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪರೇಶ್ ಮೇಸ್ತಾ ಸಾವನ್ನು ಧಾರ್ಮಿಕ ಹತ್ಯೆ ಎಂದು ಬಿಂಬಿಸಿದ್ದ BJPಯವರು ಇಡೀ ಕರಾವಳಿಯನ್ನೇ ಕೋಮುದಳ್ಳುರಿಗೆ ತಳ್ಳಿದ್ದರು. ಅಂದಿನ ನಮ್ಮ ಸರ್ಕಾರ ಯಾವ ಹಿಂಜರಿಕೆಯೂ ಇಲ್ಲದೆ ಈ ಪ್ರಕರಣದ ತನಿಖೆಯನ್ನು CBIಗೆ ವಹಿಸಿತ್ತು. ಈಗ CBI, ಮೇಸ್ತಾ ಸಾವು ಸ್ವಾಭಾವಿಕ ಎಂದು ನ್ಯಾಯಾಲಯಕ್ಕೆ ವರದಿ ನೀಡಿದೆ. ಈಗ ಎಲ್ಲಿದ್ದಾರೆ BJPಯ ಕೂಗುಮಾರಿ ನಾಯಕರು? ಎಂದು ಪ್ರಶ್ನಿಸಿದ್ದಾರೆ.
ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು CBI ತನಿಖೆಯಿಂದ ಗೊತ್ತಾಗಿದೆ. ಆದರೆ ಈ ಸಾವನ್ನು ರಾಜಕೀಯಗೊಳಿಸಿ ದೊಂಬಿ ಎಬ್ಬಿಸಿದ್ದ BJPಯವರು ನಿಜವಾದ ಸಮಾಜ ಘಾತಕರಲ್ಲವೆ? ಸುಳ್ಳು ಅಪಾದನೆ ಮಾಡಿ ಶಾಂತಿ ಭಂಗ ಮಾಡಿದ್ದು ಅಪರಾಧವಲ್ಲವೆ? BJPಯವರಿಗೆ ಆತ್ಮಸಾಕ್ಷಿಯಿದ್ದರೆ ಬಹಿರಂಗ ಕ್ಷಮೆ ಕೇಳಲಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.