ಪರೇಶ್ ಮೇಸ್ತಾ ಸಾವಿನಲ್ಲಿ ಬಿಜೆಪಿಯ ರಾಜಕಾರಣ ಬಯಲು: ಡಿ.ಕೆ. ಶಿವಕುಮಾರ್

ಕುಮಟಾ: ಪರೇಶ್ ಮೇಸ್ತಾ ಸಾವಿನ ಮೇಲೆ ಬಿಜೆಪಿ ರಾಜಕಾರಣ ಮಾಡಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದರು. ಆದರೆ ಸಿಬಿಐ ವರದಿಯಲ್ಲಿ ಸತ್ಯಾಂಶ ಹೊರಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕುಮಟಾದಲ್ಲಿ ನಡೆದ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ಕೇವಲ ಪರೇಶ್ ಮೇಸ್ತಾ ಅವರ ವಿಚಾರಕ್ಕೆ ಮಾತ್ರ ಮಾಡುತ್ತಿರುವ ಸಮಾವೇಶವಲ್ಲ. ಇದು ಜನಜಾಗೃತಿ ಸಮಾವೇಶ. ಈ ಸಮಾವೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ನಿಮ್ಮೆಲ್ಲರಿಗೂ ಕೋಟಿ ನಮಸ್ಕಾರಗಳು.ಸರ್ವಜ್ಞ ಅವರು ಒಂದು ಮಾತು ಹೇಳಿದ್ದಾರೆ. ಹುಳಿಗಳಲ್ಲಿ ನಿಂಬೆ ಹುಳಿ ಶ್ರೇಷ್ಠ, ಕಪ್ಪು ಬಣ್ಮದಲ್ಲಿ ದುಂಬಿಯ ಕಪ್ಪು ಬಣ್ಣ ಶ್ರೇಷ್ಠ, ದೇವತೆಗಳಲ್ಲಿ ಶಿವನಿಗಿಂತ ಶ್ರೇಷ್ಠ ಮತ್ತೊಬ್ಬರಿಲ್ಲ. ಅದೇ ರೀತಿ ನಂಬಿಕೆಗಿಂತ ದೊಡ್ಡ ಗುಣ ಬೇರೊಂದಿಲ್ಲ. ಸತ್ಯದ ಪರವಡಗಿರುವ ಉತ್ತರ ಕನ್ನಡ ಜಿಲ್ಲೆಯ ಜನ ನಮಗೆ ಶಕ್ತಿ ನೀಡುತ್ತೀರಿ ಎಂದು ನಂಬಿದ್ದೇನೆ. ಇಡೀ ಜಿಲ್ಲೆ ನರಳುತ್ತಿದೆ. ನೋವಿನಿಂದ ಇರುವ ನೀವು ನಿಮ್ಮ ಬದುಕಲ್ಲಿ ಬದಲಾವಣೆಗೆ ಕಾಯುತ್ತಿದ್ದೀರಿ ಎಂದರು.

- Advertisement -

ಕರಾವಳಿ ಭಾಗಕ್ಕೆ ಯಾರೂ ವ್ಯಾಪಾರ ವಹಿವಾಟು ಮಾಡದ ಪರಿಣಾಮ ಇಲ್ಲಿನ ಯುವಕರು ಉದ್ಯೋಗ ಅರಸಿ ಬೇರೆ ರಾಜ್ಯ, ದೇಶಗಳಿಗೆ ಹೋಗುತ್ತಿದ್ದಾರೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಗದ ಕಾರಣ ಉದ್ಯೋಗ ಅಗತ್ಯದ ಜನರು ವಲಸೆ ಹೋಗಬೇಕಾಗಿದೆ. ಮೋದಿ ಅವರು ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು‌. ಜನಸಾಮಾನ್ಯರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ಯಾವುದೂ ಆಗಲಿಲ್ಲ.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡುತ್ತಿರುವಾಗ ನೀವೆಲ್ಲರೂ ಬಂದು ಬೆಂಬಲ ನೀಡಿದ್ದಿರಿ. ಆ ಮೂಲಕ ನೀವು ಇಡೀ ದೇಶಕ್ಕೆ ಶಕ್ತಿ ತುಂಬಿದ್ದೀರಿ. ನಿಮ್ಮ ಹೆಜ್ಜೆ ಇತಿಹಾಸದ ಪುಟ ಸೇರಿದೆ. ಆ ಮೂಲಕ ನಿಮ್ಮ ಜೀವನದಲ್ಲಿ ಒಂದು ಮರೆಯಲಾದ ನೆನಪು ಮಾಡಿಕೊಂಡಿದ್ದೀರಿ. ರಾಜ್ಯದಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಕೇಂದ್ರದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಅವರು ಆಗಾಗ್ಗೆ ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಆದರೆ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರಾ? ಇಲ್ಲ. ಇದು ಬಸವಣ್ಣನ ಕರ್ನಾಟಕ‌. ಇದು ಕುವೆಂಪು, ಕನಕದಾಸರು, ಸಂತ ಶಿಶುನಾಳ ಶರೀಫರ ಕರ್ನಾಟಕ. ಈ ಕರ್ನಾಟಕ ಎಲ್ಲಿ ಹೋಯಿತು? ದ್ವೇಷ, ಅಸೂಯೆ, ಶಾಂತಿ ಭಂಗದ ಪರಿಣಾಮ ನಾವುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದರು.

ಮಾಜಿ ಸಂಸದರು ಹನಿ ಹನಿ ರಕ್ತ ನೀಡಿ ರಕ್ಷಣೆ ಮಾಡುವುದಾಗಿ ಹೇಳಿದ್ದಾರೆ. ಆದರೆ 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ನಿಮ್ಮ ಸರ್ಕಾರಕ್ಕೆ ಇವರಿಗೆ ರಕ್ಷಣೆ ನೀಡಲು ಆಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅವರಿಗೆ ರಕ್ಷಣೆ ನೀಡಲಿದೆ. ಬಿಜೆಪಿ ಚುನಾವಣೆ ಸಮಯದಲ್ಲಿ ಏನು ಭರವಸೆ ನೀಡಿದ್ದರು ಎಂದು ಅವರ ಪ್ರಣಾಳಿಕೆ ತೆಗೆದು ನೋಡಿ. ಆ ಬಗ್ಗೆ ನಾವು ನಿತ್ಯ ಪ್ರಶ್ನೆ ಕೇಳುತ್ತಿದ್ದೇವೆ. ಆದರೂ ಬೊಮ್ಮಾಯಿ ಅವರಾಗಲಿ, ಬಿಜೆಪಿಯ ಯಾವುದೇ ನಾಯಕರಾಗಲಿ ಬಾಯಿ ಬಿಚ್ಚುತ್ತಿಲ್ಲ. 1 ಲಕ್ಷದವರೆಗೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಯಾಕೆ ಮಾಡಲಿಲ್ಲ? ಮೈತ್ರಿ ಸರ್ಕಾರ ಬಂದಾಗ ನಮ್ಮ ಶಕ್ತಿ ಅನುಸಾರ ಸಾಲ ಮನ್ನಾ ಮಾಡಿದ್ದೇವೆ. ನಿಮ್ಮ ಡಬಲ್ ಇಂಜಿನ್ ಸರ್ಕಾರದಲ್ಲಿ ಯಾವುದಾದರೂ ಒಂದು ಜನಪರ ಯೋಜನೆ ಮಾಡಿದ್ದೀರಾ? ರೈತರ ಆದಾಯ ಡಬಲ್ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಪರೇಶ್ ಮೇಸ್ತಾ ಅವರ ಸಾವಿನ ಮೇಲೆ ಬಿಜೆಪಿಯವರು ರಾಜಕಾರಣ ಮಾಡಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದರು. ಆದರೆ ಸಿಬಿಐ ವರದಿಯಲ್ಲಿ ಸತ್ಯಾಂಶ ಹೊರಬಂದಿದೆ. ಆಪರೇಷನ್ ಕಮಲದ ಮೂಲಕ ನೀವು ಹಲವರನ್ನು ಕರೆದುಕೊಂಡಿರಿ. ಆದರೆ ಇದೀಗ ನಿಮ್ಮ ಪಕ್ಷದಿಂದ ಹಲವು ನಮ್ಮ ಪಕ್ಷ ಸೇರುತ್ತಿದ್ದಾರೆ. ಈ ಜಿಲ್ಲೆಯ ಬಿ.ಎಸ್. ಪಾಟೀಲ್ ಅವರು ಕೂಡ ಕಾಂಗ್ರೆಸ್ ಪಕ್ಷ ಸೇರಲು ಅರ್ಜಿ ಹಾಕಿದ್ದಾರೆ. ಸದ್ಯದಲ್ಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಮೊನ್ನೆಯಷ್ಟೇ ಯು.ಬಿ‌ ಬಣಕಾರ್ ಅವರನ್ನು ಸೇರಿಸಿಕೊಂಡಿದ್ದೇವೆ. ಇನ್ನು ಜೆಡಿಎಸ್ ನಲ್ಲಿದ್ದ ಮಧು ಬಂಗಾರಪ್ಪ, ಪಕ್ಷದ ಕ್ಷೇತ್ರದ ಮಂಜುನಾಥ್ ಗೌಡರು ಸೇರಿದಂತೆ 30-35 ಮಂದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇನ್ನು ಹಲವು ಮಂದಿ ಪಕ್ಷ ಸೇರುವವರಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.