Home ಟಾಪ್ ಸುದ್ದಿಗಳು ಪರೇಶ್ ಮೇಸ್ತ ಪ್ರಕರಣ| ಬಿಜೆಪಿಗೆ  ಮಾನ ಮರ್ಯಾದೆ ಇದ್ದರೆ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೇಳಲಿ: ಸಿದ್ದರಾಮಯ್ಯ

ಪರೇಶ್ ಮೇಸ್ತ ಪ್ರಕರಣ| ಬಿಜೆಪಿಗೆ  ಮಾನ ಮರ್ಯಾದೆ ಇದ್ದರೆ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೇಳಲಿ: ಸಿದ್ದರಾಮಯ್ಯ

►ಸಿಬಿಐ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ

ಬೆಂಗಳೂರು: ಪರೇಶ್ ಮೇಸ್ತ ಸಾವಿಗೆ ಸಂಬಂಧಿಸಿದಂತೆ ಬಿಜೆಪಿಗೆ  ಮಾನ ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು ಎಂದಿದ್ದಾರೆ.

ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ. ಬಿಜೆಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ ಎಂದು ಹೇಳಿದ್ದಾರೆ.

ಉತ್ತರ ಕನ್ನಡದ ಹೊನ್ನಾವರದಲ್ಲಿ 2017ರಲ್ಲಿ ಯುವಕ ಪರೇಶ ಮೇಸ್ತ ಸಾವು ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು, ಪರೇಶ್ ಮೇಸ್ತಾ  ಎಂಬ ಯುವಕನನ್ನು ಯಾರೂ ಕೊಲೆ ಮಾಡಿಲ್ಲ.ಅದು ಆಕಸ್ಮಿಕ ಸಾವು ಎಂದು  ಸಿಬಿಐ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ನಾಲ್ಕು ವರ್ಷಕ್ಕೂ ಅಧಿಕ ಕಾಲ ತನಿಖೆ ನಡೆಸಿದ ಸಿ.ಬಿ.ಐ ಅಧಿಕಾರಿಗಳು, ಸುಮಾರು 1,500 ಪುಟಗಳ ವರದಿಯನ್ನು ಹೊನ್ನಾವರದ ನ್ಯಾಯಾಲಯಕ್ಕೆ ಭಾನುವಾರ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯವು ಸೋಮವಾರ ಸ್ವೀಕೃತಗೊಳಿಸಿದೆ. ಮುಂದಿನ ವಿಚಾರಣೆಯನ್ನು ನ.16ಕ್ಕೆ ಮುಂದೂಡಿದೆ.

Join Whatsapp
Exit mobile version