ಮೈಸೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ಮಗಳನ್ನು ಹೆತ್ತ ತಂದೆ ತಾಯಿ ಸೇರಿ ಕೊಲೆ ಮಾಡಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಎರಡನೇ ಪಿಯು ವಿದ್ಯಾರ್ಥಿನಿ ಶಾಲಿನಿ (17) ಕೊಲೆಗೀಡಾದ ಅಪ್ರಾಪ್ತೆ. ಮಗಳನ್ನು ಕೊಲೆಗೈದ ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೀಡಾದ ಅಪ್ರಾಪ್ತೆಯು ಪಕ್ಕದ ಗ್ರಾಮದ ಮೆಲ್ಲಹಳ್ಳಿಯ ಯುವಕ ಮಂಜು ಅನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಶಾಲಿನಿ ಪೋಷಕರು ವಿರೋಧಿಸಿದ್ದರು ಎನ್ನಲಾಗಿದೆ.
ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದ್ದರು. ಪ್ರಿಯಕರನಿಗಾಗಿ ಶಾಲಿನಿ ಮನೆ ಬಿಟ್ಟಿದ್ದಳು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ಪೊಲೀಸರ ಮುಂದೆ ಶಾಲಿನಿ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಹೀಗಾಗಿ ಶಾಲಿನಿ ಬಾಲಮಂದಿರಕ್ಕೆ ಸೇರಿಕೊಂಡಿದ್ದಳು. ಇತ್ತೀಚೆಗಷ್ಟೆ ಮಗಳನ್ನು ಪೋಷಕರಾದ ಸುರೇಶ್ ಹಾಗೂ ಬೇಬಿ ಮನೆಗೆ ಕರೆ ತಂದು ಮಗಳನ್ನು ಕೊಲೆ ಮಾಡಿದ್ದಾರೆ. ಶಾಲಿನಿ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿದೆ. ತಮಗೆ ಅವಮಾನ ಮಾಡಿದಕ್ಕೆ ಮಗಳನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.