ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿಯೇ ಅಕ್ರಮ ಎಸಗುತ್ತಿರುವುದು ಮತ್ತೆ ಸಾಬೀತಾಗಿದೆ. ಒಳ ಉಡುಪಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡು ಕೈದಿಗೆ ನೀಡಲು ಹೋದ ಸಿಬ್ಬಂದಿಯೊಬ್ಬರು ಜೈಲು ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಚಾಲಕ ಭಾನುಪ್ರಕಾಶ್ ಬಂಧಿತ ಆರೋಪಿಯಾಗಿದ್ದು, ಜುಲೈ 25 ರಂದು ಇವರು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಭಾನುಪ್ರಕಾಶ್, ಜೈಲು ಪ್ರವೇಶ ಮಾಡುವಾಗ ಕೆಎಸ್ಐಎಸ್ಎಫ್ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಆಗ, ಭಾನುಪ್ರಕಾಶ್ ಒಳ ಉಡುಪಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡಿರುವುದು ತಿಳಿದುಬಂದಿದೆ. ಈ ವಿಚಾರವಾಗಿ ಕಾರಾಗೃಹದ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನ ಪರಪ್ಪನ ಅಗ್ರಹಾರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಭಾನುಪ್ರಕಾಶ್ ಅವರನ್ನು ಬಂಧಿಸಲಾಗಿದೆ.
ಮೊಬೈಲ್ ಯಾರಿಗೆ ಕೊಡಲು ಕೊಂಡೊಯ್ಯಲಾಗುತ್ತಿತ್ತು ಎನ್ನುವ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಿಂದ, ಜೈಲಿನಲ್ಲಿ ನಡೆಯುವ ಅಕ್ರಮಗಳಿಗೆ ಕೆಲ ಜೈಲು ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪಗಳಿಗೆ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ.
ಜೈಲು ಸಿಬ್ಬಂದಿಯು ಹಣದ ಆಸೆಗೆ ಮೊಬೈಲ್, ಮಾದಕ ವಸ್ತುಗಳ ಪೂರೈಕೆ ಮಾಡುತ್ತಿದ್ದಾರೆ. ಜೈಲಿನಲ್ಲಿ ಕೈದಿಗಳ ಬಳಿ ಹಣ ಪಡೆದು ನಿಷೇಧಿತ ವಸ್ತುಗಳ ಪೂರೈಕೆ ಮಾಡುತ್ತಾರೆ ಎನ್ನಲಾಗಿದೆ.